ಕೊಣಾಜೆ: ಶಿವಗಿರಿ ಮಠ ವರ್ಕಳ ಮತ್ತು ಶ್ರೀ ನಾರಾಯಣ ಗುರು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಇದರ ಆಶ್ರಯದಲ್ಲಿ ಶತಮಾನ ಮಹಾ ಪ್ರಸ್ಥಾನ ಶ್ರೀ ನಾರಾಯಣ ಗುರು – ಗಾಂಧೀಜಿ ಸಂವಾದ ಶತಮಾನೋತ್ಸವ ಕಾರ್ಯಕ್ರಮವು ಡಿಸೆಂಬರ್ ನಲ್ಲಿ ನಡೆಯಲಿದ್ದು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರು ಭಾಗವಹಿಸಲಿದ್ದು, ಇದರ ಪೂರ್ವಭಾವಿ ಸಭೆಯು ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರ ನೇತೃತ್ವದಲ್ಲಿ ಬುಧವಾರದಂದು ಅಸೈಗೋಳಿಯ ಬಂಟರಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಯು.ಟಿ.ಖಾದರ್ ಅವರು ಬ್ರಹ್ಮಶ್ರೀ ನಾರಾಯಣಗುರು ಹಾಗೂ ಗಾಂಧೀಜಿಯ ಸಂವಾದದ ಶತಮಾನೋತ್ಸವ ರಾಜ್ಯ ಮಟ್ಟದ ಐತಿಹಾಸಿಕ ಕಾರ್ಯಕ್ರಮವು ಡಿ.3ರಂದು ಕೊಣಾಜೆಯಲ್ಲಿ ನಡೆಯಲಿದ್ದು ಎಲ್ಲಾ ವರ್ಗದ ಜನರು ಭಾಗವಹಿಸಲಿದ್ದು, ಬಂಧುತ್ವದ ಸಹೋದರತೆ, ಸೌಹಾರ್ದತೆಯ ಕಾರ್ಯಕ್ರಮವಾಗಲಿದೆ ಎಂದರು.
ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾದಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಅವರು ಮಾತನಾಡಿ, ಮಹಾತ್ಮ ಗಾಂಧೀಜಿಯವರು ಮೂರು ಬಾರಿ ಶಿವಗಿರಿಗೆ ಬಂದಿದ್ದರು. ಗಾಂಧೀಜಿಯವರ ಸ್ವಾತಂತ್ರ್ಯದ ಹೋರಾಟದೊಂದಿಗೆ ಸಮಾಜದಲ್ಲಿದ್ದ ಅಸ್ಪೃಶ್ಯತೆಯನ್ನು ದೂರಗೊಳಿಸಲು ಪ್ರೇರಣೆಯಾದವರು ಬ್ರಹ್ಮಶ್ರೀ ನಾರಾಯಣಗುರುಗಳು. ಇದೀಗ ಅವರ ಸಮ್ಮಿಳನವು ಶತಮಾನೋತ್ಸವವನ್ನು ಆಚರಿಸುತ್ತಿದ್ದು, ಈ ಕಾರ್ಯಕ್ರಮವು ಈ ನಾಡಿನ ಜನರಿಗೆ ಒಂದು ಅವಕಾಶವಾಗಿದೆ ಎಲ್ಲರು ಸಹಕರಿಸುವಂತೆ ವಿನಂತಿಸಿದರು.
ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ ದಾಮೋದರ್ ಕುಂದರ್ ಅವರು ಮಾತನಾಡಿ, ರಾಜ್ಯ ಮಟ್ಟದ ಒಂದು ಕಾರ್ಯಕ್ರಮವು ಇದೀಗ ಕೊಣಾಜೆ ವ್ಯಾಪ್ತಿಯಲ್ಲಿ ನಡೆಯುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಹಿರಿಯರಾದ ಇಬ್ರಾಹಿಂ ಕೋಡಿಜಾಲ್ ಅವರು ಮಾತನಾಡಿ, ಬ್ರಹಶ್ರೀ ನಾರಾಯಣ ಗುರು ಹಾಗೂ ಗಾಂಧೀಜಿ ಅವರ ತತ್ವ ಆದರ್ಶಗಳು ನಮಗೆಲ್ಲರಿಗೂ ಮಾದರಿಯಾಗಿದೆ. ಅವರ ಸಂದೇಶಗಳು ಯಶಸ್ವಿಯಾಗಬೇಕಾದರೆ ನಾವೆಲ್ಲರೂ ಜಾತಿ, ಮತ, ಪಕ್ಷ ಭೇದವಿಲ್ಲದೆ ಒಗ್ಗಟ್ಟಾಗಿ ಡಿಸೆಂಬರ್ ನಲ್ಲಿ ನಡೆಯುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.
ಸಭೆಯಲ್ಲಿ ಮುಖಂಡರಾದ ಕೆ.ಟಿ.ಸುವರ್ಣ,ಮೂಡ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಮುಖಂಡರಾದ ಹೈದರ್ ಪರ್ತಿಪ್ಪಾಡಿ, ಚಂದ್ರಹಾಸ್ ಉಳ್ಳಾಲ್, ತಹಶೀಲ್ದಾರ್ ಪ್ರಭಾಕರ್ ಕೋರೆ, ನಾರಾಯಣ ಅಧ್ಯಯನ ಪೀಠದ ನಿರ್ದೇಶಕರಾದ ಜಯರಾಜ್ , ಸಲಹಾ ಸಮಿತಿ ಸದಸ್ಯ ಪಿ.ವಿ.ಮೋಹನ್, ಪ್ರಶಾಂತ್ ಕಾಜವ, ದೇವದಾಸ ಭಂಡಾರಿ, ಕಣಚೂರು ಮೋನು, ರಕ್ಷಿತ್ ಶಿವರಾಂ ಬೆಳ್ತಂಗಡಿ, ನೋಡಲ್ ಅಧಿಕಾರಿ ಪ್ರೊ.ಭೋಜ ಪೂಜಾರಿ ಹಾಗೂ ವಿವಿಧ ಸಂಘಟನೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಂಟರ ಸಂಘದ ಅಧ್ಯಕ್ಷರಾದ ರವೀಂದ್ರ ರೈ ಕಲ್ಲಿಮಾರ್ ಅವರು ಸ್ವಾಗತಿಸಿದರು. ಕ್ಲೇರಾ ಕುವೆಲ್ಲೋ ವಂದಿಸಿದರು.




