ಬಾಲಿವುಡ್ ಹಿರಿಯ ನಟ ಧರ್ಮೇಂದ್ರ (89) ಅವರು ಚೇತರಿಸಿಕೊಳ್ಳುತ್ತಿದ್ದು, ವೈದ್ಯಕೀಯ ನಿಗಾದಲ್ಲಿದ್ದಾರೆ ಎಂದು ಅವರ ಪುತ್ರಿ ಇಶಾ ಡಿಯೋಲ್ ಮಂಗಳವಾರ ದೃಢಪಡಿಸಿದ್ದಾರೆ. ಈ ಮೂಲಕ ನಟನ ನಿಧನದ ಕುರಿತು ಹಬ್ಬಿದ್ದ ಸುಳ್ಳು ವದಂತಿಗಳಿಗೆ ತೆರೆ ಎಳೆದಿದ್ದಾರೆ.


ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪುತ್ರಿ ಇಶಾ ಪೋಸ್ಟ್ ಹಂಚಿಕೊ0ಡಿದ್ದು, “ಮಾಧ್ಯಮಗಳು ಅತಿಯಾಗಿ ವರ್ತಿಸುತ್ತಿದ್ದು, ಸುಳ್ಳು ಸುದ್ದಿಗಳನ್ನು ಹರಡುತ್ತಿವೆ. ನಮ್ಮ ತಂದೆಯವರ ಆರೋಗ್ಯ ಸ್ಥಿರವಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ನಮ್ಮ ಕುಟುಂಬಕ್ಕೆ ಖಾಸಗಿ ಸಮಯ ನೀಡಬೇಕೆಂದು ಎಲ್ಲರಲ್ಲಿ ವಿನಂತಿಸುತ್ತೇವೆ. ಪಪ್ಪಾ ಬೇಗ ಗುಣಮುಖರಾಗಲೆಂದು ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು” ಎಂದಿದ್ದಾರೆ.ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್ ಮೂಲಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಧರ್ಮೇಂದ್ರ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಬಾಲಿವುಡ್‌ನ ಹೀ ಮ್ಯಾನ್, ಎವರ್‌ಗ್ರೀನ್ ಸ್ಟಾರ್, ಆಕ್ಷನ್ ಕಿಂಗ್ ಎಂದು ಜನಪ್ರಿಯರಾಗಿರುವ ಹಿರಿಯ ನಟ ಧರ್ಮೇಂದ್ರ ಅವರು, 1960ರಲ್ಲಿ ‘ದಿಲ್ ಭೀ ತೇರಾ ಹಮ್ ಭೀ ತೇರೆ’ ಮೂಲಕ ಹಿಂದಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ಬಂದಿನಿ, ಅನುಪಮಾ, ಶೋಲೆ, ಚುಪ್ಕೆ ಚುಪ್ಕೆ, ಮೇರಾ ಗಾಂವ್ ಮೇರಾ ದೇಶ್ ಮತ್ತು ಡ್ರೀಮ್ ಗರ್ಲ್ ಸೇರಿದಂತೆ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಾಯಕ ನಟನಾಗಿ, ಪೋಷಕ ನಟನಾಗಿ ಅಭಿನಯಿಸಿದ್ದಾರೆ. ನಟನಾಗಿ, ನಿರ್ಮಾಪಕನಾಗಿ ಸುಮಾರು 6 ದಶಕಗಳ ಕಾಲ ಹಿಂದಿ ಚಿತ್ರರಂಗದಲ್ಲಿ ಧರ್ಮೇಂದ್ರ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಸಿನಿಮಾ ಜೊತೆಗೆ ರಾಜಕೀಯ ಕ್ಷೇತ್ರದಲ್ಲೂ ಧರ್ಮೇಂದ್ರ ಅವರು ಯಶಸ್ಸು ಕಂಡಿದ್ದರು. 2004ರಿಂದ 2009ರ ತನಕ ಬಿಜೆಪಿಯಿಂದ ಅವರ ಸಂಸದನಾಗಿ ಕೆಲಸ ಮಾಡಿದ್ದರು. ಕಿರುತೆರೆ ಕಾರ್ಯಕ್ರಮಗಳ ಜಡ್ಜ್ ಆಗಿ ಕೂಡ ಅವರು ಕಾಣಿಸಿಕೊಂಡಿದ್ದಾರೆ.





