ಬಂಟ್ವಾಳ, ನ. 27 : ಸಜೀಪನಡು ಗ್ರಾಮದ ದೇರಾಜೆಯ ದೀಕ್ಷಿತ್ ಅವರ ಮನೆಗೆ ವಿದ್ಯುತ್ ದುರಸ್ತಿಯವನ ಸೋಗಿನಲ್ಲಿ ನುಗ್ಗಿದ ಕಳ್ಳನೋರ್ವ 42 ಸಾವಿರ ರೂ. ಮೌಲ್ಯದ 7 ಗ್ರಾಂ ಚಿನ್ನಾಭರಣ ಹಾಗೂ 6 ಸಾವಿರ ರೂ. ನಗದನ್ನು ಕಳವು ಮಾಡಿದ ಘಟನೆ ನಡೆದಿದೆ.


ಮನೆಯಲ್ಲಿ ಸರೋಜಿನಿ ಎನ್ನುವ ಮಹಿಳೆಯನ್ನು ನಿಲ್ಲಿಸಿ ಮನೆಮಂದಿ ಪಾಣೆಮಂಗಳೂರಿನಲ್ಲಿ ನಡೆಯುತ್ತಿದ್ದ ಮದುವೆಗೆ ತೆರಳಿದ್ದರು. ಮಧ್ಯಾಹ್ನ 2-3 ರ ಮಧ್ಯೆ ಅಪರಿಚಿತ ವ್ಯಕ್ತಿಯೋರ್ವ ಆಗಮಿಸಿ ದೀಚು (ದೀಕ್ಷಿತ್) ಅವರು ಮನೆಯ ವಿದ್ಯುತ್ ವಯರ್ ಹಾಗೂ ಲೈಟ್ ದುರಸ್ತಿ ಮಾಡಲು ತಿಳಿಸಿದ್ದಾರೆಂದು ಹೇಳಿದನು. ಸತ್ಯವೆಂದು ನಂಬಿದ ಸರೋಜಿನಿ ಆತನನ್ನು ಒಳಗೆ ಬಿಟ್ಟಿದ್ದರು.ಆತ ದುರಸ್ತಿಯ ನಾಟಕ ಮಾಡಿ ಮಲಗುವ ಕೋಣೆಯ ಮಂಚದ ಕೆಳಭಾಗದಲ್ಲಿ ಬ್ಯಾಗ್ನಲ್ಲಿದ್ದ ಚಿನ್ನ ಹಾಗೂ ನಗದನ್ನು ಕಳವು ಮಾಡಿದ್ದಾನೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




