UN NETWORKS
ಸೋಮೇಶ್ವರ: ಸೋಮೇಶ್ವರದಲ್ಲಿ ರೈಲು ಬರುವ ಹಿನ್ನೆಲೆಯಲ್ಲಿ ಗೇಟು ಹಾಕುತ್ತಿದ್ದಾಗಲೇ ಬಂದ ಮಿನಿಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಗೇಟು ತುಂಡಾಗಿದೆ, ಇದರ ಪರಿಣಾಮ ವಾಹನ ಸವಾರರು ಎದುರಿಸಬೇಕಾಯಿತು.
ಶನಿವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಕೇರಳದಿಂದ ರೈಲು ಬರುವ ಹಿನ್ನೆಲೆಯಲ್ಲಿ ಗೇಟ್ ಕೀಪರ್ ವಾಹನ ತಡೆಯುವ ನಿಟ್ಟಿನಲ್ಲಿ ಗೇಟು ಹಾಕುತ್ತಿದ್ದರು. ಈ ಸಂದರ್ಭ ಉಚ್ಚಿಲದಿಂದ ಉಳ್ಳಾಲದತ್ತ ಹೋಗುತ್ತಿದ್ದ ಮಿನಿಲಾರಿ ತಾಗಿದ್ದರಿಂದ ತುಕ್ಕು ಹಿಡಿದಿದ್ದ ಗೇಟು ತುಂಡಾಗಿ ಬಿದ್ದಿದೆ. ಈ ಸಂದರ್ಭ ಇನ್ನೊಂದು ಬದಿಯ ಗೇಟು ಅರ್ಧದಲ್ಲೇ ನಿಂತಿತು. ಈ ಸಂದರ್ಭ ಗೇಟ್ ಕೀಪರ್ ಎರಡೂ ಕಡೆ ಸಂಕಲೆಗಳನ್ನು ಅಳವಡಿಸಿದರು.
ಗೇಟು ತುಂಡಾಗಿದ್ದರಿಂದ ಬೇರೆ ದಾರಿ ಕಾಣದೆ ಹಾಕಿದ ಸಂಕಲೆ ತೆಗೆಯಲು ಗೇಟ್ ಕೀಪರ್ ಮುಂದಾಗಲಿಲ್ಲ. ಇದರಿಂದ ಅಸಮಾಧಾನಗೊಂಡ ಒಂದಿಬ್ಬರು ಬೈಕ್ ಚಾಲಕರು ಸಂಕಲೆ ದಾಟಿ ತಮ್ಮ ಪ್ರಯಾಣ ಮುಂದುವರಿಸಿದರು. ಇದನ್ನು ಗಮನಿಸಿದ ಇನ್ನೂ ಕೆಲವು ಮಂದಿ ಸಂಕಲೆಯನ್ನೇ ಮುರಿಯಲು ಮುಂದಾದರು. ಅದರಿಂದ ಗಲಿಬಿಗೊಂಡ ಗೇಟ್ ಕೀಪರ್, ರೈಲು ಬರುವ ಹೊತ್ತಾಯಿತು ಎಂದು ವಾಹನ ಸವಾರರನ್ನು ತಡೆದು ಸಂಕಲೆ ಭದ್ರಪಡಿಸಿದರು. ಹಲವು ಹೊತ್ತು ಕಾದ ವಾಹನ ಸವಾರರು ಬೇರೆ ದಾರಿ ಕಾಣದೆ ಪರ್ಯಾಯ ಮಾರ್ಗದಲ್ಲಿ ಪ್ರಯಾಣಿಸಬೇಕಾಯಿತು.
ಈ ಗೇಟು ಪುರಾತನ ಕಾಲದ್ದಾಗಿರುವುದರಿಂದ ನಿರಂತರ ಜಾಮ್ ಆಗುವುದು ನಡೆಯುತ್ತಲೇ ಇದೆ ಎಂದು ಸಾರ್ವಜನಿಕರು ದೂರಿದ್ದಾರೆ.




