ಮಂಗಳೂರು: ಕಳೆದ ಮೂರು ದಿನಗಳ ಅವಧಿಯಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮೂವರು ಯುವ ದ್ವಿಚಕ್ರ ವಾಹನ ಸವಾರರು ಮೃತಪಟ್ಟಿರುವ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಶುಕ್ರವಾರ ಸಜಿಪ ನಿವಾಸಿಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟರೆ, ಶನಿವಾರ ತ್ವಾಕೆ ನಿವಾಸಿ ಯುವಕನೊಬ್ಬ ಮಲಪುರಂ ಪ್ರದೇಶದಲ್ಲಿ ಸಂಭವಿಸಿದ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ. ಭಾನುವಾರ ಪಾತುರು ನಿವಾಸಿ ಯುವಕ ಎಕ್ಕೂರು ಪ್ರದೇಶದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮನೆಯ ಆಧಾರಸ್ತಂಭರಾಗಿದ್ದ ಈ ಮೂವರು ಯುವಕರ ಅಕಾಲಿಕ ನಿಧನದಿಂದ ಕುಟುಂಬಸ್ಥರು ಹಾಗೂ ಬಂಧು-ಬಳಗ ದುಃಖದಲ್ಲಿ ಮುಳುಗಿದ್ದಾರೆ. ಒಂದೇ ಪ್ರದೇಶದ ಮೂವರು ಯುವಕರು ಕೇವಲ ಮೂರು ದಿನಗಳ ಅಂತರದಲ್ಲಿ ಅಪಘಾತಗಳಿಗೆ ಬಲಿಯಾಗಿರುವುದು ರಸ್ತೆ ಸುರಕ್ಷತೆ ಕುರಿತು ಗಂಭೀರ ಚಿಂತನೆಗೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ವಾಹನ ಸವಾರರು, ವಿಶೇಷವಾಗಿ ಯುವಕರು, ದ್ವಿಚಕ್ರ ವಾಹನ ಚಲಾಯಿಸುವ ವೇಳೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಅತಿವೇಗ ಹಾಗೂ ನಿರ್ಲಕ್ಷ್ಯ ಚಾಲನೆಯನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಕೆಲವೇ ನಿಮಿಷಗಳ ಆತುರ ಅಥವಾ ಅಜಾಗರೂಕತೆಯಿಂದ ಅಮೂಲ್ಯ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ಮನೆಯವರ ನಿರೀಕ್ಷೆ, ತಂದೆ-ತಾಯಿ, ಪತ್ನಿ-ಮಕ್ಕಳು ಹಾಗೂ ಕುಟುಂಬದವರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಸುರಕ್ಷಿತ ಚಾಲನೆಗೆ ಆದ್ಯತೆ ನೀಡಬೇಕೆಂದು ಸಾಮಾಜಿಕ ಕಾರ್ಯಕರ್ತರು ಕರೆ ನೀಡಿದ್ದಾರೆ.

