UN NETWORKS
ಮುಡಿಪು: ಪರಂಪರೆಯೊಂದಿಗೆ ಹೊಸತನವನ್ನು ಯಕ್ಷಗಾನಕ್ಕೆ ಪರಿಚಯಿಸುವುದರೊಂದಿಗೆ, ಯಕ್ಷಗಾನದಲ್ಲಿ ಆರೋಗ್ಯಕರ ವಾತಾವರಣವನ್ನು ಸೃಷ್ಟಿ ಮಾಡಿದವರಲ್ಲಿ ಹಿರಿಯ ಬಲಿಪ ನಾರಾಯಣ ಭಾಗವತರು ಪ್ರಮುಖರಾಗಿದ್ದಾರೆ. ಯಕ್ಷಗಾನ ಕ್ಷೇತ್ರಕ್ಕೆ ಹಿರಿಯ ಬಲಿಪರ ಕೊಡುಗೆ ಅಪಾರವಾದುದು ಎಂದು ಮಂಗಳೂರು ಸರಕಾರಿ ರಥಬೀದಿ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ನಾಗವೇಣಿ ಮಂಚಿ ಅವರು ಅಭಿಪ್ರಾಯ ಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಯಕ್ಷಮಂಗಳ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ `ಹಿರಿಯ ಬಲಿಪ ನಾರಾಯಣ ಭಾಗವತ’ ವಿಷಯದ ಕುರಿತು ಮಾತನಾಡಿದರು.
ಯಕ್ಷಗಾನವು ಪರಂಪರೆಯೊಂದಿಗೆ ಸಮರ್ಥವಾಗಿರಬೇಕು ಎಂಬುದು ಹಿರಿಯ ಬಲಿಪ ನಾರಾಯಣ ಭಾಗವತರ ಆಶಯವಾಗಿತ್ತು. ಇದಕ್ಕಾಗಿ ಅವರು ಯಾವುದೇ ನಿಷ್ಟುರತೆಯನ್ನು ಎದುರಿಸಲು ಸಿದ್ಧರಿದ್ದರು. ಯಕ್ಷಗಾನ ಪದ್ಯಕ್ಕಿಂತ ಹೆಚ್ಚಾಗಿ ದೀರ್ಘವಾಗಿ ಅರ್ಥ ಹೇಳುವುದನ್ನೂ ಅವರು ವಿರೋಧಿಸುತ್ತಿದ್ದರು. ಹಿಂದಿನ ಕಾಲದಲ್ಲಿ ಭಾಗತವರು ಸೇರಿ ಹಿಮ್ಮೇಳ ಕಲಾವಿದರು ಪ್ರದರ್ಶನ ಮುಗಿಯುವ ವರೆಗೆ ನಿಂತುಕೊಂಡೇ ಇರಬೇಕಿತ್ತು. ಆದರೆ ಬಲಿಪಜ್ಜ ಭಾಗವತರು ಇದರಲ್ಲಿ ಬದಲಾವಣೆಯನ್ನು ತಂದು ಕುಳಿತು ಪದ್ಯ ಹೇಳುವ ಕ್ರಮವನ್ನು ಆರಂಭಿಸಿದರು ಎಂದು ಹೇಳಿದರು.
ಸುಮಾರು 21 ಪ್ರಸಂಗ ಕೃತಿಗನ್ನು ಬರೆದಿರುವ ಇವರಿಗೆ ಸುಮಾರು 60ಕ್ಕಿಂತ ಹೆಚ್ಚು ಪ್ರಸಂಗಗಳು ಕಂಠ ಪಾಠವಾಗಿತ್ತು. ಅವರ ಹಾಡುಗಾರಿಕೆಗೆ ಮೈಕ್ ಬೇಕಾಗಿರಲಿಲ್ಲ. ಒಂದು ಮೈಲು ದೂರ ಅವರ ಸ್ವರ ಕೇಳುತ್ತಿತ್ತು. ಭಾಗವತಿಕೆಯಲ್ಲಿ ಅಂದು ಅವರು ಆರಂಭಿಸಿದ ಬಲಿಪ ಶೈಲಿ ಭಾಗವತಿಕೆಯನ್ನು ಅವರು ಕುಟುಂಬದವರು ಇಂದು ಕೂಡಾ ಮುಂದುವರಿಸಿಕೊಂಡು ಹೋಗುತ್ತಿರುವುದು ವಿಶೇಷವಾಗಿದೆ. ಒಟ್ಟಿನಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಬಲಿಪ ವಂಶಸ್ಥರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಜಪ್ಪ ಅವರು ವಹಿಸಿ ಮಾತನಾಡಿದರು.
ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಅವರು, ಹಿರಿಯ ಬಲಿಪ ನಾರಾಯಣ ಭಾಗವತರ ವಿಷಯದಲ್ಲಿ ನಾವು ಅಧ್ಯಯನ ನಡೆಸಿದಾಗ ಹಿಂದಿನ ಕಾಲದಲ್ಲಿದ್ದ ಯಕ್ಷಗಾನ ಹಾಗೂ ಕಲಾವಿದರ ಸ್ಥಿತಿಗತಿಯನ್ನು ತಿಳಿಯಲು ಸಾಧ್ಯವಾಗುತ್ತದೆ. ಅಂದಿನ ಕಾಲದಲ್ಲಿ ಕಲಾವಿದರು ಬಡತನವಿದ್ದರೂ ಕಲೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಶರತ್ ಕುಮಾರ್, ಯಕ್ಷಗಾನ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್, ಯಕ್ಷಗಾನ ಕೇಂದ್ರದ ಸತೀಶ್ ಕೊಣಾಜೆ, ಬಾಲಚಂದ್ರ ಮೊದಲಾದವರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಧ್ಯಾಪಕ ಡಾ.ಚೇತನ್ ಸೋಮೇಶ್ವರ್ ಅವರು ಸ್ವಾಗತಿಸಿದರು. ವಿದ್ಯಾರ್ಥಿನಿ ಕಾವ್ಯಶ್ರೀ ವಂದಿಸಿದರು. ವಿದ್ಯಾರ್ಥಿನಿ ಜ್ಞಾನೇಶ್ವರಿ ಕಾರ್ಯಕ್ರಮ ನಿರೂಪಿಸಿದರು.