ಉಳ್ಳಾಲ : ಯುಗಧರ್ಮದಂತೆ ಬದಲಾವಣೆ ಸಹಜವಾಗಿದ್ದು ಧಾರ್ಮಿಕ ವ್ಯವಸ್ಥೆಯಲ್ಲಿಯೂ ಬದಲಾವಣೆ ಅನಿವಾರ್ಯ. ಹಿಂದಿನ ಕಾಲದ ವ್ಯವಸ್ಥೆಗಳನ್ನು ಪ್ರಸ್ತುತ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿದಾಗ ಅದನ್ನು ವಿರೋಧಿಸುವುದಕ್ಕಿಂತ ಒಪ್ಪಿಕೊಳ್ಳಬೇಕಾಗುತ್ತದೆ. ಯಾಕೆಂದರೆ ವಿಶಾಲವಾಗಿರುವ ಹಿಂದೂ ಧರ್ಮವನ್ನು ಅರಿತುಕೊಳ್ಳುವುದೇ ಬಹಳಷ್ಟಿರುವಾಗ ಅಲ್ಪಸ್ವಲ್ಪ ತಿಳಿದುಕೊಂಡು ಅದರಲ್ಲಿನ ಆಚರಣೆ, ಪದ್ಧತಿಗಳು, ನಂಬಿಕೆಗಳನ್ನು ಅರ್ಥೈಸಿಕೊಳ್ಳದೆ ನಿಂದಿಸುವುದು ತಪ್ಪು ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಮಂಗಳೂರು ಆವೃತ್ತಿಯ ಮುಖ್ಯ ಪ್ರಸರಣಾಧಿಕಾರಿ ನವನೀತ ಶೆಟ್ಟಿ ಕದ್ರಿ ಅಭಿಪ್ರಾಯಪಟ್ಟರು.
ತಲಪಾಡಿ ದೇವಿಪುರದ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರು ಹಾಗೂ ಪರಿವಾರ ದೇವರುಗಳ ಪುನರ್ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆಯುತ್ತಿರುವ ಆರನೆಯ ದಿನದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ವಿಶ್ವಾಮಿತ್ರ ನಾಯಿ ಮಾಂಸ ತಿಂದನೆಂದು ಅವರನ್ನು ದೂಷಿಸುವುದಕ್ಕಿಂತ ವಿಶ್ವಾಮಿತ್ರರು ನಾಯಿ ಮಾಂಸವನ್ನು ಮಂತ್ರಶಕ್ತಿಯಿಂದ ಸ್ವಚ್ಛಗೊಳಿಸಿ ತಿಂದು, ಆ ಮೂಲಕ ಭೂಲೋಕದ ಬರಗಾಲವನ್ನು ದೇವತೆಗಳಿಗೆ ತಿಳಿಸುವ ಪ್ರಯತ್ನವನ್ನು ಮಾಡಿದ್ದರು ಎಂಬ ಮರ್ಮ ಅರಿಯದವರು ಹಿಂದೂಗಳನ್ನು ದೂರದೆ ಮತ್ತೇನು ಮಾಡಿಯಾರು? ಅಷ್ಟಕ್ಕೂ ಹಾಗೆ ದೂರುವವರು ಅಪ್ಪಟ ಹಿಂದೂಗಳಾಗಲು ಸಾಧ್ಯವಿಲ್ಲ. ಯಾಕೆಂದರೆ ಪ್ರಪಂಚದ ಎಲ್ಲ ಭಾಗದಲ್ಲಿ ಬೇರೂರಿದ್ದ ಆರಾಧನೆ ಪದ್ಧತಿ, ಕಾಲಕ್ರಮೇಣ ಬೇರೆ ಬೇರೆ ರೂಪ ಹಾಗೂ ಬೇರೆ ಬೇರೆ ಸ್ವರೂಪದಲ್ಲಿ ಆರಾಧಿಸುವ ಪರಿಕಲ್ಪನೆ ಬೆಳೆದು ಬಂತು. ಮುಂದೆ ವ್ಯಕ್ತಿ, ಮತದ ಮೂಲಕ ರಾಷ್ಟಿ ್ರಯ ಚಿಂತನೆಗಳು ಪ್ರಧಾನವಾಯಿತು. ಕೆಲವೆಡೆ ಮತವೇ ಪ್ರಧಾನವಾಗಿ ಬದಲಾಯಿತು ಎಂದರು.
ಎಲ್ಲ ಭಾಗದಲ್ಲಿ ಭಾಷೆ ಜನರನ್ನು ಒಟ್ಟು ಮಾಡಿದರೆ ಭಾರತದಲ್ಲಿ ಭಾಷಾ ವಿಷಯವೇ ನಮ್ಮನ್ನು ದೂರ ಮಾಡಿದೆ. ಆದರೆ ಧರ್ಮ ಮಾತ್ರ ನಮ್ಮನ್ನು ಒಂದು ಮಾಡಿದೆ. ಕಾಶಿಯಲ್ಲಿರುವ ವಿಶ್ವನಾಥನಾಗಲೀ, ತಿರುಪತಿಯಲ್ಲಿರುವ ಶ್ರೀನಿವಾಸನಾಗಲೀ ಬೇರೆ ಭಾಷೆ ಮಾತನಾಡುವ ಜನರ ರಾಜ್ಯದಲ್ಲಿದ್ದರೂ ಅದು ನಮ್ಮ ದೇವರು ಎಂಬ ಭಾವ ನಮ್ಮಲ್ಲಿದೆ. ಕದ್ರಿ ಜೋಗಿ ಮಠದಲ್ಲಿ ಇಂದಿಗೂ ಉತ್ತರ ಭಾರತದ ಪ್ರಧಾನರುಗಳ ತೀರ್ಮಾನವೇ ಆಂತಿಮ. ಹಾಗಾಗಿ ಧರ್ಮ ದೇಶದ ಎಲ್ಲ ಮೂಲೆಯ ಜನರನ್ನು ಒಂದು ಮಾಡಿದೆ ಎಂದರು.
ಮರದ ಹುಳ ಮರವನ್ನೇ ತಿನ್ನುತ್ತದೆ ಎಂಬ ಹಾಗೆ ನಮ್ಮ ಧರ್ಮಕ್ಕೆ ನಮ್ಮ ಧರ್ಮದವರೇ ಶತ್ರುಗಳು. ನಮ್ಮ ಧರ್ಮದ ಬೆಳವಣಿಗೆಗೆ ಇನ್ನೊಂದು ಧರ್ಮದ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ದುರ್ಜನರು ಸಬಲರಾಗುವುದು ಸಜ್ಜನರು ಮೌನಿಗಳಾದಾಗ ಎಂಬ ನುಡಿ ಸದಾ ನಮ್ಮ ಮನದಲ್ಲಿರಬೇಕು ಎಂದು ನುಡಿದರು.
ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ಕಾರ್ಯಕ್ರಮ ಉದ್ಘಾಟಿಸಿದರು.
ಶ್ರೀ ಕ್ಷೇತ್ರ ಕೊಂಡೆವೂರಿನ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಆಧ್ಯಕ್ಷ ರಾಮ್ ಮನೋಹರ್ ರೈ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಸಿ.ಆಳ್ವ ನೆತ್ತಿಬಾಳಿಕೆ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಮೋನಪ್ಪ ಭಂಡಾರಿ, ಬಂಗ್ರ ಮಂಜೇಶ್ವರ ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಹರಿಶ್ಚಂದ್ರ ಶೆಟ್ಟಿಗಾರ್, ಮರೋಳಿಯ ಸೂರ್ಯ ನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ಕೊಟ್ಟಾರಿ, ಮಂಗಳೂರಿನ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಡಾ. ಅಣ್ಣಯ್ಯ ಕುಲಾಲ್, ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ರಘುರಾಮ್ ಭಟ್ ಬೆಳ್ಳೂರು, ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ನನ್ಯ ಆಚ್ಯುತ ಮೂಡಿತ್ತಾಯ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ನ್ಯಾಯವಾದಿ ರವೀಂದ್ರನಾಥ ರೈ ಸ್ವಾಗತಿಸಿದರು. ರವಿ ಅಲೆವೂರಾಯ ಕಾರ್ಯಕ್ರಮ ನಿರೂಪಿಸಿದರು. ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ನಾರಾಯಣ ಕಜೆ ವಂದಿಸಿದರು.