


ಮುನ್ನೂರು: ಬೇಸಿಗೆ ಶಿಬಿರಗಳು ಮಕ್ಕಳ ಭವಿಷ್ಯಕ್ಕೆ ಪ್ರೇರಣೆಯ ಬೀಜ ಬಿತ್ತುತ್ತವೆ. ಮಹಿಳಾ ಸಂಘಟನೆಯ ಕಾರ್ಯವೈಖರಿ ಪ್ರಶಂಸನೀಯವಾಗಿದೆ, ಶಿಬಿರಗಳ ಆಯೋಜನೆಯ ಮೂಲಕ ಅವರು ಮಕ್ಕಳಲ್ಲಿ ಸೃಜನಾತ್ಮಕತೆ, ಶಿಸ್ತು, ಆತ್ಮವಿಶ್ವಾಸ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುತ್ತಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕಿ ಉಷಾ ಹೇಳಿದರು.
ಅವರು ಭ್ರಾಮರಿ ಮಹಿಳಾ ಮಂಡಲದ ಪ್ರಥಮ ವಾರ್ಷಿಕೋತ್ಸವ ಹಾಗೂ ಮೂರು ದಿನದ ಚಿಣ್ಣರ ಚಾವಡಿ 2.0 ಬೇಸಿಗೆ ಶಿಬಿರಕ್ಕೆ ಮುನ್ನೂರು ಸುಭಾಷನಗರದ ಸಮುದಾಯ ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಶಿಬಿರಗಳು ತಾಂತ್ರಿಕ ಕೌಶಲ್ಯಗಳು, ಕಲೆ, ಆಟೋಟಾಪಗಳ ಮೂಲಕ ಮಕ್ಕಳನ್ನು ಸಮಗ್ರ ವ್ಯಕ್ತಿತ್ವ ವಿಕಸನದತ್ತ ದಾರಿ ಮಾಡಿಸುತ್ತವೆ. ಮಹಿಳಾ ಸಂಘಗಳ ಸಕ್ರಿಯ ಪಾಲ್ಗೊಳ್ಳುವಿಕೆ ಸಮಾಜದ ಬಾಳಿಗೆ ಹೊಸ ಬೆಳಕು ತರುತ್ತಿದೆ. ಇವರು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಅದನ್ನು ಪುಷ್ಟಿಮಾಡುವ ಕೆಲಸದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಈ ಮೂಲಕ ಇವರು ಮುಂದಿನ ಪೀಳಿಗೆಗೆ ನುರಿತ, ಜವಾಬ್ದಾರಿಯುತ ನಾಗರಿಕರನ್ನು ರೂಪಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವ ವಕೀಲರಾದ ಮಹಮದ್ ಅಸ್ಗರ್ ಮಾತನಾಡಿ, ಮಕ್ಕಳ ಹಕ್ಕುಗಳನ್ನು ಕಾಪಾಡುವುದು ಮತ್ತು ಮಹಿಳೆಯರ ಸಾಧನೆಯನ್ನು ಗುರುತಿಸುವುದು ಎರಡೂ ಸಮಾಜವನ್ನು ಬೆಳಗಿಸುವ ದೀಪ. ಮಕ್ಕಳು ನಾಡಿನ ಭವಿಷ್ಯ. ಅವರು ಆರೋಗ್ಯವಾಗಿ, ಸುಖವಾಗಿ, ಭಯವಿಲ್ಲದೆ ಬೆಳೆದಾಗ ಮಾತ್ರ ಸಮಾಜವೂ ನಂಬಿಕೆಯಿAದ ಬೆಳೆಯುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ, ಆರೈಕೆ, ಭದ್ರತೆ ಮತ್ತು ಅಭಿವ್ಯಕ್ತಿಯ ಹಕ್ಕುಗಳನ್ನು ಕಲ್ಪಿಸುವುದು ಪ್ರತಿಯೊಬ್ಬನ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಲಸೆ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಸೇರ್ಪಡಿಸಿ ಸಮಾಜಮುಖಿ ಸಾಧನೆ ನಡೆಸಿದ ಅಧ್ಯಾಪಕಿ ಗೀತಾ ಸಲ್ದಾನ್ಹ , ಬ್ಯಾಡ್ಮಿಂಟನ್ನಿನಲ್ಲಿ ಗಿನ್ನೆಸ್ ದಾಖಲೆ ನಡೆಸಿದ ಕಾವ್ಯ, ಮುನ್ನೂರು ಗ್ರಾಮ ಪಂಚಾಯತ್ ನಿಕಟ ಪೂರ್ವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾಜ್ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುನ್ನೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಕಾಂತ್ ಎಂ, ಅಯ್ಯಪ್ಪ ಭಜನಾ ಮಂದಿರದ ಟ್ರಸ್ಟಿ ಭಾಗ್ಯರಾಜ್, ದುರ್ಗಾ ವಾಹಿನಿ ಮಹಿಳಾ ಮಂಡಲದ ಉಪಾಧ್ಯಕ್ಷರಾದ ಶಾರದಾ ನಾಯರ್, ಸುನೀತಾ ನಾಯಕ್, ಗೌರವಾಧ್ಯಕ್ಷರಾದ ಧನಲಕ್ಷ್ಮೀ ಗಟ್ಟಿ, ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರುತಿ ಮೀನಾಕ್ಷಿ ಉಪಸ್ಥಿತರಿದ್ದರು.
ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಲಾ ವಂದಿಸಿದರು. ಕಾರ್ಯಕ್ರಮದಲ್ಲಿ 93 ಶಿಬಿರಾರ್ಥಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.