




ಉಳ್ಳಾಲ: 2024-2025ನೇ ಸಾಲಿನ ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ’ ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯ ಲೇಖಕಿ ಕ್ಯಾಥರಿನ್ ರೊಡ್ರಿಗಸ್ ಹಾಗೂ ಸಮಾಜ ಸೇವೆಯಲ್ಲಿ ಹಿರಿಯ ಸಮಾಜ ಸೇವಕಿ – ಸುವಾಸಿನಿ ದಾಮೋದರ್ ಆಯ್ಕೆಗೊಂಡಿದ್ದಾರೆ.
ಎಂ.ಎ. ಪದವಿಧರರಾಗಿರುವ ಕ್ಯಾಥರಿನ್ ರೊಡ್ರಿಗಸ್ರವರು ಸಾಹಿತ್ಯ ಕ್ಷೇತ್ರದ ಬಹುಮುಖ ಪ್ರತಿಭೆ ಮತ್ತು ಬಹುಭಾಷಾ ಪ್ರತಿಭೆ. ಕನ್ನಡ, ತುಳು, ಕೊಂಕಣಿಯಲ್ಲಿ ಕಥೆ, ಕವನ, ಕಾದಂಬರಿ, ಪ್ರಬಂಧ, ನಾಟಕಗಳನ್ನು ರಚಿಸುವ ಮೂಲಕ ಕರಾವಳಿಯ ಶ್ರೇಷ್ಠ ಸಾಹಿತಿಗಳಲ್ಲೊಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ಇವರು 56 ತುಳು ನಾಟಕಗಳನ್ನು, 11 ಕೊಂಕಣಿ ನಾಟಕಗಳನ್ನು, 8 ಕನ್ನಡ ನಾಟಕಗಳನ್ನು ರಚಿಸಿದ್ದು ನಾಟಕ ರಂಗದಲ್ಲಿ ಬಹು ಪ್ರಸಿದ್ಧ ನಾಟಕಕಾರರಾಗಿದ್ದಾರೆ. ಇವರ ಜಯ ವಿಜಯ ನಾಟಕವು 48 ಪ್ರದರ್ಶನಗಳನ್ನು, ಬಂಗರ್ದ ದೊಡ್ಡಿ ನಾಟಕವು 12 ಪ್ರದರ್ಶನಗಳನ್ನು ಕಂಡಿರುವುದು ಕ್ಯಾಥರಿನ್ ರೊಡ್ರಿಗಸ್ರವರ ನಾಟಕಗಳ ಸತ್ವವನ್ನು ತಿಳಿಸುತ್ತದೆ. ಅನುವಾದ ಸಾಹಿತ್ಯ ರಚನೆಯಲ್ಲಿಯೂ ಇವರು ಮುಂಚೂಣಿಯಲ್ಲಿದ್ದು ತುಳುವಿನಿಂದ ಕನ್ನಡಕ್ಕೆ, ಕೊಂಕಣಿಗೆ ಅನೇಕ ಕೃತಿಗಳನ್ನು ಅನುವಾದ ಮಾಡಿದ್ದಾರೆ. ಆಕಾಶವಾಣಿಯಲ್ಲಿ ಕನ್ನಡ, ತುಳು, ಕೊಂಕಣಿ ಭಾಷೆಗಳ ನಾಟಕ, ಕಥೆ, ಭಾಷಣ, ಚರ್ಚೆಗಳ ಸುಮಾರು 160ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ. ಸಾರ್ವಜನಿಕ ಕ್ಷೇತ್ರದಲ್ಲಿ ಕ್ಯಾಥರಿನ್ ರೊಡ್ರಿಗಸ್ರವರ ಕೊಡುಗೆ ಮಹತ್ವದ್ದಾಗಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆ, ಕರಾವಳಿ ಪ್ರಾಧಿಕಾರದ ಸದಸ್ಯೆ, ಸ್ಥಳೀಯ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಚರ್ಚ್ ನ ಸದಸ್ಯೆಯಾಗಿ ಕಾರ್ಯ ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸದಾ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸುವಾಸಿನಿ ದಾಮೋದರ್ರವರು 80ರ ಇಳಿ ವಯಸ್ಸಿನಲ್ಲಿಯೂ ಇತರರ ಸೇವೆಗಾಗಿ ಕಾಳಜಿಯನ್ನು ಹೊಂದಿದ್ದಾರೆ. ಮಕ್ಕಳು, ಮಹಿಳೆಯರು, ಅಶಕ್ತರು, ಬಡವರು, ರೋಗಿಗಳು, ವಿಶೇಷ ಚೇತನರು, ಅಸಹಾಯಕರು, ವಿದ್ಯಾರ್ಥಿಗಳು, ದುರ್ಬಲರು – ಇವರೆಲ್ಲರ ಕಣ್ಣೀರು ಒರೆಸುವ ಕಾಯಕದಲ್ಲಿ ತಮ್ಮ ಬದುಕಿನ ಬಹುತೇಕ ಸಮಯವನ್ನು ಕಳೆದಿದ್ದಾರೆ. ಸಮಾಜಸೇವೆಗಾಗಿ ಇವರು ಸುಮಾರು ಮೂವತ್ತಕ್ಕೂ ಹೆಚ್ಚು ಸಂಘ – ಸಂಸ್ಥೆಗಳಲ್ಲಿ ಸದಸ್ಯತ್ವವನ್ನು ಹೊಂದಿದ್ದಾರೆ.
ಮಂಗಳೂರಿನ ಡೀಡ್ಸ್ ಸಂಸ್ಥೆಯ ಕಾರ್ಯದರ್ಶಿ, ದ.ಕ. ಮಹಿಳಾ ವೇದಿಕೆಯ ಉಪಾಧ್ಯಕ್ಷೆ, ಸಾಕ್ಷರತಾ ಮಹಿಳಾ ವೇದಿಕೆಯ ಅಧ್ಯಕ್ಷೆ, ದ.ಕ. ಜಿಲ್ಲಾ ಪರಿಸರಾಸಕ್ತ ಒಕ್ಕೂಟದ ಉಪಾಧ್ಯಕ್ಷೆ, ಆದರ್ಶ ಮಹಿಳಾ ಮಂಡಲದ ಅಧ್ಯಕ್ಷೆ, ಪೆರ್ಮನ್ನೂರು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ, ಲಯನ್ಸ್ ಕ್ಲಬ್ ಚೋಟಾ ಮಂಗಳೂರು ಇದರ ಮಾಜಿ ಅಧ್ಯಕ್ಷೆ, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಉಪಾಧ್ಯಕ್ಷೆ, ಪೆರ್ಮನ್ನೂರು ಮಹಿಳಾ ಆರೋಗ್ಯ ಸಂಘದ ಅಧ್ಯಕ್ಷೆ, ಅಪ್ನಾ ದೇಶ್ ಇದರ ಉಪಾಧ್ಯಕ್ಷೆ, ಹಿಂದೂ ರುದ್ರಭೂಮಿ ಸದಸ್ಯೆ – ಇನ್ನೂ ಅನೇಕ ಸಂಸ್ಥೆಗಳ ಪದಾಧಿಕಾರಿಯಾಗಿದ್ದಾರೆ.
ಸುಮಾರು ಹತ್ತು ಗ್ರಾಮಗಳಲ್ಲಿ ಮಹಿಳಾ ಮಂಡಲಗಳನ್ನು ಮತ್ತು ಬಾಲವಾಡಿಗಳನ್ನು ಪ್ರಾರಂಭಿಸುವಲ್ಲಿ ಇವರ ಕೊಡುಗೆ, ಪ್ರಯತ್ನ ಇದೆ. ವಿವಿಧ ಆಸ್ಪತ್ರೆಗಳ ಸಹಯೋಗದೊಂದಿಗೆ ನೂರಾರು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು, ಉಚಿತ ಶಸ್ತ್ರಚಿಕಿತ್ಸಾ ಶಿಬಿರಗಳನ್ನು, ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ಏರ್ಪಡಿಸಿರುತ್ತಾರೆ.