ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ 75ರ ಮಂಗಳೂರು- ಬಿ.ಸಿ.ರೋಡು ಹೆದ್ದಾರಿಯನ್ನು ತ್ಯಾಜ್ಯ ಮುಕ್ತಗೊಳಿಸುವ ನಿಟ್ಟಿನಲ್ಲಿ ಸ್ವಚ್ಛತೆಗಾಗಿ ನಿಮ್ಮೊಂದಿಗೆ ನಾವು, ನಮ್ಮೊಂದಿಗೆ ನೀವು ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿ ಅಡ್ಯಾರ್ ನಿಂದ ಫರಂಗಿಪೇಟೆ ಮೂಲಕ ಕಡೆಗೋಳಿವರೆಗೆ ಸ್ವಚ್ಛತಾ ಅಭಿಯಾನ ನಡೆಸಲಾಯಿತು.


ದ.ಕ.ಜಿಲ್ಲಾಡಳಿತ, ದ.ಕ.ಜಿ.ಪಂ.ಸ್ವಚ್ಛ ಭಾರತ್ ಮಿಷನ್, ಪುದು ಗ್ರಾ.ಪಂ., ಅಡ್ಯಾರ್ ಗ್ರಾ.ಪಂ. ಹಾಗೂ ಹಸಿರು ದಳ ಮಂಗಳೂರು ಆಶ್ರಯದಲ್ಲಿ ದ.ಕ.ಜಿ.ಪಂ.ಉಪಕಾರ್ಯದರ್ಶಿ ಜಯಲಕ್ಷ್ಮೀ ರಾಯಕೋಡ್ ಮಾರ್ಗದರ್ಶನದಲ್ಲಿ ಹೆದ್ದಾರಿ ಬದಿಯ ತ್ಯಾಜ್ಯಗಳನ್ನು ತೆರವು ಮಾಡಲಾಯಿತು. ಎರಡು ಗ್ರಾ.ಪಂ.ತಂಡದ ಜತೆಗೆ ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ತಂಡ, ಹಸಿರು ದಳದ ಕಾರ್ಯಕರ್ತರು, ಮಂಗಳೂರು ಸಂತ ಅಲೋಶಿಯಸ್ ಕಾಲೇಜು, ಸಂತ ಆ್ಯಗ್ನೇಸ್ ಕಾಲೇಜು ಹಾಗೂ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯದ ಎನ್.ಎಸ್.ಎಸ್.ಘಟಕಗಳ ಸ್ವಯಂಸೇವಕರು ಸ್ವಚ್ಛತಾ ಕಾರ್ಯ ನಡೆಸಿದರು.

ಪುದು ಗ್ರಾ.ಪಂ.ಅಧ್ಯಕ್ಷೆ ರಶೀದಾ ಬಾನು, ಅಭಿವೃದ್ಧಿ ಅಧಿಕಾರಿ ಹರೀಶ್ ಕೆ.ಎ, ಅಡ್ಯಾರ್ ಗ್ರಾ.ಪಂ.ಅಧ್ಯಕ್ಷ ಅಬ್ದುಲ್ ಜಲೀಲ್, ಅಭಿವೃದ್ಧಿ ಅಧಿಕಾರಿ ಕೃಷ್ಣ ನಾಯ್ಕ್, ಹಸಿರು ದಳದ ನಾಗರಾಜ್, ಪಂಚಾಯತ್ ಸಿಬಂದಿ, ವಿವಿಧ ಕಾಲೇಜುಗಳ ಉಪನ್ಯಾಸಕರು ಪಾಲ್ಗೊಂಡಿದ್ದರು. ಅಭಿಯಾನದ ಭಾಗವಾಗಿ ಈಗಾಗಲೇ ಹಸಿರು ದಳದ ನೇತೃತ್ವದಲ್ಲಿ ವೇಸ್ಟ್ ಡಪ್ಪಿಂಗ್ ಸ್ಕ್ವಾಡ್ ರಚನೆಗೊಂಡು ಅದರ ತಂಡದ ಸದಸ್ಯರು ಹೆದ್ದಾರಿ ಬದಿ ಹಾಗೂ ತ್ಯಾಜ್ಯ ಎಸೆಯದಂತೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ವಿವಿಧ ಸಂಘ ಸಂಸ್ಥೆಗಳ ತಂಡಗಳು, ಸ್ವಸಹಾಯ ಗುಂಪುಗಳ ಸದಸ್ಯರು, ಕಾಲೇಜುಗಳ ತಂಡಗಳು ಕೂಡ ಜಾಗೃತಿ ಕಾರ್ಯದಲ್ಲಿ ಪಾಲ್ಗೊಳ್ಳಲಿವೆ.