ಉಳ್ಳಾಲ : ಉಳ್ಳಾಲದಲ್ಲಿ ನಡೆದ ದಸರಾ ಮೆರವಣಿಗೆಯ ವೇಳೆ ಉಂಟಾದ ಸಣ್ಣ ವಿವಾದವನ್ನು ಮೋಗವೀರ ಸಮಾಜ, ಉಳ್ಳಾಲ ದಸರಾ ಸಮಿತಿ ಹಾಗೂ ಪೊಲೀಸರ ಮಧ್ಯೆ ಸಂಪೂರ್ಣವಾಗಿ ಶಾಂತಿಯುತವಾಗಿ ಬಗೆಹರಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.



ಪ್ರತಿಯೊಂದು ಧಾರ್ಮಿಕ ಮೆರವಣಿಗೆಯ ಮೊದಲು ಆಯೋಜಕರು ಸಮಯ ವಿಸ್ತರಣೆಗೆ ವಿನಂತಿ ಮಾಡುತ್ತಿದ್ದರು ಮತ್ತು ನಿಗದಿತ ಅವಧಿಯೊಳಗೆ ಮೆರವಣಿಗೆಯನ್ನು ಪೂರ್ಣಗೊಳಿಸುತ್ತಿದ್ದರು. ಉಳ್ಳಾಲದ ಆಯೋಜಕರು ಸಹ ಸಭೆಯಲ್ಲಿ ರಾತ್ರಿ 1 ಗಂಟೆಯೊಳಗೆ ಮೆರವಣಿಗೆಯನ್ನು ಮುಗಿಸಲು ಒಪ್ಪಿಕೊಂಡಿದ್ದರು. ಕಾನೂನಿನ ಪ್ರಕಾರ ರಾತ್ರಿ 12 ನಂತರ ಧ್ವನಿವರ್ಧಕ ಬಳಕೆ ನಿಷೇಧಿತವಾದರೂ, ಮೆರವಣಿಗೆಯ ಸೌಕರ್ಯಕ್ಕಾಗಿ ಪೊಲೀಸ್ ಇಲಾಖೆ ವಿಶೇಷವಾಗಿ ಅನುಮತಿ ನೀಡಿತ್ತು.
ಆದರೆ ಮೆರವಣಿಗೆ ನಿಗದಿತ ಸಮಯದಲ್ಲಿ ಮುಗಿಯದೆ ಹೋದ ಕಾರಣ ಅಧಿಕಾರಿಗಳು ಸಂಗೀತವನ್ನು ನಿಲ್ಲಿಸಲು ಸೂಚಿಸಿದರು. ಆ ಸಂದರ್ಭದಲ್ಲಿ ಮೈಕ್ ನಿಲ್ಲಿಸಲು ಹೋದ ಉಪನಿರೀಕ್ಷಕರಿಗೆ ಮೆರವಣಿಗೆಯಲ್ಲಿದ್ದ ವ್ಯಕ್ತಿಯೋರ್ವ ಅಸಭ್ಯ ಶಬ್ದ ಬಳಸಿ ಅವಮಾನ ಮಾಡಿದ್ದಾರೆ. ಉಪನಿರೀಕ್ಷಕರು ಮೂರು ಜನರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದುಕೊಂಡು ಬಂದರು. ಇದರಿಂದ ಕೋಪಗೊಂಡ ಕೆಲವು ಮಂದಿ ಶಾರದಾ ಮೂರ್ತಿಯನ್ನು ಅಲ್ಲಿ ಬಿಟ್ಟು ಠಾಣೆಯ ಎದುರು ಜಮಾಯಿಸಿದರು ಮತ್ತು ಬಂಧಿತರ ಬಿಡುಗಡೆಗೆ ಒತ್ತಾಯಿಸಿದರು.
ಘಟನೆಯ ಸ್ಥಳಕ್ಕೆ ಆಗಮಿಸಿದ ಉಪ ಪೊಲೀಸ್ ಆಯುಕ್ತರು ಇಬ್ಬರ ಪಾತ್ರ ಸಣ್ಣದಾಗಿದೆ ಎಂದು ಪರಿಗಣಿಸಿ ಅವರಿಗೆ ಮೆರವಣಿಗೆಯಲ್ಲಿ ಭಾಗವಹಿಸಲು ಅನುಮತಿಸಿದರು. ನಂತರ ಮೆರವಣಿಗೆ ಶಾಂತಿಯುತವಾಗಿ ಮುಕ್ತಾಯವಾಯಿತು.
ಪರಿಣಾಮವಾಗಿ ಸಮಿತಿ ಸದಸ್ಯರು ಆಯುಕ್ತರನ್ನು ಭೇಟಿಯಾಗಿ ವಿಷಯವನ್ನು ಚರ್ಚಿಸಿದರು. ಉಪನಿರೀಕ್ಷಕರೊಬ್ಬರು ಕೋಪದಲ್ಲಿ ತಾಸೆಯ ಕೋಲನ್ನು ಎಸೆದಿದ್ದಾರೆಂಬ ಆರೋಪದ ಕುರಿತು ಆಯುಕ್ತರು, “ಅದು ತಪ್ಪು ಎಂದು ಒಪ್ಪಿಕೊಂಡಿದ್ದೇನೆ ಮತ್ತು ಕ್ಷಮೆಯಾಚನೆ ಮಾಡಿದ್ದೇನೆ,” ಎಂದು ಹೇಳಿದರು. ಆಯೋಜಕರು ಸಹ ಉಪನಿರೀಕ್ಷಕರಿಗೆ ಅಸಭ್ಯ ಶಬ್ದ ಬಳಕೆ ಮಾಡಿದವರ ವರ್ತನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅವರ ಮನವಿಯ ಮೇರೆಗೆ ತನಿಖೆ ವೇಳೆ ಯಾವುದೇ ಪ್ರಚೋದಕ ಕ್ರಮ ನಡೆಯದಿದ್ದರೆ ಬಂಧನ ಕೈಗೊಳ್ಳುವುದಿಲ್ಲ ಎಂದು ಆಯುಕ್ತರು ಭರವಸೆ ನೀಡಿದರು.
“ನಾವು ದಸರಾ ಮೆರವಣಿಗೆಯನ್ನು ನಿಲ್ಲಿಸಲಿಲ್ಲ. ಪೊಲೀಸರನ್ನು ಅವಮಾನಿಸಿದ, ಈಗಾಗಲೇ 307 ಸೆಕ್ಷನ್‌ನ ಪ್ರಕರಣ ಹೊಂದಿದ್ದ ಆರೋಪಿಯನ್ನು ಮಾತ್ರ ವಶಕ್ಕೆ ಪಡೆದಿದ್ದೇವೆ. ಮೆರವಣಿಗೆಯನ್ನು ನಿಲ್ಲಿಸಿದವರು ದುಷ್ಕರ್ಮಿಗಳೇ,” ಎಂದು ಆಯುಕ್ತರು ಸ್ಪಷ್ಟಪಡಿಸಿದರು. ಮೊಗವೀರ ಸಮಾಜ, ದಸರಾ ಸಮಿತಿ ಹಾಗೂ ಪೊಲೀಸರ ನಡುವೆ ವಿಷಯ ಸಂಪೂರ್ಣವಾಗಿ ಬಗೆಹರಿದಿದೆ ಎಂದು ಆಯುಕ್ತರು ತಿಳಿಸಿದರು. ಕೆಲವರು ಈಗ ಸಮಾಜವನ್ನು ಪ್ರಚೋದಿಸಿ ತಮ್ಮ ಸ್ವಾರ್ಥಕ್ಕಾಗಿ ಪ್ರಯೋಜನ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು. ಮೊಗವೀರರು ಸಹಜವಾಗಿ ಶಾಂತಸ್ವಭಾವದವರು. ಸಮಾಜದ ಕಲ್ಯಾಣ ಬಯಸುವವರು ಅವರ ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕೈಜೋಡಿಸಲಿ ಪ್ರಚೋದನೆಗೆ ಬಳಸಬಾರದು,” ಎಂದು ತಿಳಿಸಿದ್ದಾರೆ




