ಕೋಟೆಕಾರು: ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಬರುವ ಬಗಂಬಿಲ ಪ್ರದೇಶದ ಸರ್ವೆ ನಂಬರ್ 301/3 ರಲ್ಲಿ 1.50 ಎಕರೆ ಜಮೀನನ್ನು ಎಫ್ ಎಸ್ ಟಿಪಿ ಮತ್ತು ಎಸ್ ಟಿಪಿ ಕಾದಿರಿಸಲು ಕೋಟೆಕಾರು ಪ.ಪಂ ಗೆ ಉಳ್ಳಾಲ ತಾಲೂಕು ತಹಶೀಲ್ದಾರ್ ಆದೇಶಿಸಿದ್ದು, ಕೋಟೆಕಾರು ವ್ಯಾಪ್ತಿಯಲ್ಲಿ ನಿವೇಶನ ರಹಿತರ ಸಂಖ್ಯೆ ಅಧಿಕವಿದ್ದರೂ, ಕ್ರೀಡಾಂಗಣ, ವಾಕಿಂಗ್ ಪಾತ್ , ಪಾರ್ಕಿಂಗ್ ಮೀಸಲಿರಿಸಿದ್ದ ಜಮೀನನ್ನು ಇದೀಗ ಏಕಾಏಕಿ ಕೊಳಚೆ ಸ್ಥಾವರ ನಿರ್ಮಿಸಲು ಮುಂದಾಗಿರುವುದು ಬಗಂಬಿಲ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣ ಪಂಚಾಯತ್ ನ ನಿರ್ಣಯ ಪಡೆದುಕೊಳ್ಳದೇ, ಅಲ್ಲದೆ ಸಂಬಂಧಿಸಿದ ಪರಿಸರ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯದೇ ಏಕಾಏಕಿ ನಿರ್ಧಾರ ಕೈಗೊಂಡಿರುವುದು ಹಲವರ ಅನುಮಾನಕ್ಕೆ ಕಾರಣವಾಗಿದೆ.
ಬಗಂಬಿಲ ಪರಿಸರದಲ್ಲಿ ಕೊಳಚೆ ನೀರು ಸಂಸ್ಕರಿಸುವ ಘಟಕವನ್ನು ಸ್ಥಾಪಿಸಲು ಉದ್ದೇಶಿಸುವ ಮೂಲಕ ಬಗಂಬಿಲ ಪರಿಸರ ನಿವಾಸಿ ಜನರ ಜೀವದ ಜೊತೆಗೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ. ಜನತೆ ಹಿತವನ್ನು ಕಾಪಾಡಬೇಕಾದ ಕೋಟೆಕಾರು ಪಟ್ಟಣ ಪಂಚಾಯತ್ ಕೌನ್ಸಿಲರುಗಳ ವಿಶ್ವಾಸವನ್ನು ಪಡೆದುಕೊಳ್ಳದೇ ತಹಶೀಲ್ದಾರ್ ನಿರ್ಣಯಕ್ಕೆ ಮುಂದಾಗಿರುವುದು ಜನತೆ ಆಕ್ರೋಶಕ್ಕೆ ಕಾರಣವಾಗಿದೆ. ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣವಾದಲ್ಲಿ ಮಗುವಿನಿಂದ ಹಿಡಿದು ವಯಸ್ಸಾದವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಇದರಿಂದ ಶ್ವಾಸಕೋಶ ಸಂಬಂಧಿಸಿದ ಕಾಯಿಲೆ, ಕ್ಯಾನ್ಸರ್ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳು ಎದುರಾಗಲಿದೆ ಎಂಬ ಆತಂಕವನ್ನು ಬಗಂಬಿಲ ನಿವಾಸಿಗಳು ವ್ಯಕ್ತಪಡಿಸಿದ್ದಾರೆ.
ಕಾನೂನು ಚೌಕಟ್ಟು ಮೀರಿದ ತಹಸೀಲ್ದಾರರು!?
ಸ್ಥಳೀಯ ನಿವಾಸಿಗಳಿಗೂ, ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯರಿಗೂ ಮಾಹಿತಿ ನೀಡದೆ, ಕನಿಷ್ಠ ನಿರ್ಣಯವನ್ನೂ ಮಾಡದೆ ಕೋಟೆಕಾರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ಉಳ್ಳಾಲ ತಾಲೂಕು ತಹಶಿಲ್ದಾರರು ಪೋನ್ ಕರೆ ಮಾಡಿ ಮೌಖಿಕ ಅದೇಶ ಮಾಡುವ ಎಫ್ ಎಸ್ ಟಿಪಿ/ ಎಸ್ ಟಿ ಪಿ ಗೆ ಕೂಡಲೇ ಜಾಗ ಕಾಯ್ದಿರಿಸಲು ಒತ್ತಡ ತಂದಿರುವ ಬಗ್ಗೆ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಆದೇಶ ನೀಡುವಾಗ ಕೋಟೆಕಾರು ಪಂಚಾಯತ್ ಮುಖ್ಯಾಧಿಕಾರಿಗಳ ಫೋನ್ ಕರೆಯ ಪತ್ರದ ಬಗ್ಗೆ ಸಹಾಯಕ ಕಮಿಷನರ್ ಪ್ರಶ್ನೆ ಮಾಡಿ ಸ್ಪಷ್ಟ ನೆಯನ್ನು ತಹಶೀಲ್ದಾರಿಗೆ ಕೇಳಿಲ್ಲ . ಇದರ ಹಿಂದೆ ಕಾಂಗ್ರೆಸ್ ಮುಖಂಡರು ಹಾಗೂ ಈ ಭಾಗದ ಶಾಸಕರ ಕೈವಾಡವಿದೆ ಅನ್ನುವ ಆರೋಪ ಮಾಡಿದ್ದಾರೆ.
ಕಾನೂನು ಪ್ರಕಾರ ಯಾವುದೇ ತ್ಯಾಜ್ಯ ಘಟಕವನ್ನು ವಸತಿ ಪ್ರದೇಶಗಳಿರುವ ಕಡೆ ಮಾಡುವಂತಿಲ್ಲ. ಇದು ಮಾಡುವ ಮುನ್ನ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಬೇಕು.ಕೋಟೆಕಾರು ಪಟ್ಟಣ ಪಂಚಾಯತ್ ನಿಂದ ನಿರಪೇಕ್ಷಣಾ ಪತ್ರ ಎನ್ ಓಸಿ ಪಡೆಯುವುದು ಕಡ್ಡಾಯ . ಸಾಮಾನ್ಯ ಘನ ತ್ಯಾಜ್ಯ ಘಟಕಗಳಿಗೆ 200-500 ಮೀಟರ್, ಲ್ಯಾಂಡ್‌ಫಿಲ್‌ಗೆ 500 ಮೀಟರ್-1 ಕಿಮೀ, ಮತ್ತು ಅಪಾಯಕಾರಿ ತ್ಯಾಜ್ಯ ಘಟಕಗಳಿಗೆ 500 ಮೀಟರ್-1 ಕಿಮೀ ದೂರವನ್ನು ಬೇಕೆಂದು ಕಾನೂನು ಇದೆ. ವಸತಿ ಪ್ರದೇಶದ ಸಮೀಪದ ಸಮುದಾಯದಿಂದ ಯಾವುದೇ ವಿರೋಧವಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಲು ಸಾರ್ವಜನಿಕ ಸಮಾಲೋಚನೆ ನಡೆಸಬೇಕು. ಈ ಬಗ್ಗೆ ದಾಖಲೆಯನ್ನು ಸಹಾಯಕ ಕಮಿಷನರ್ ಅಥವಾ ತಹಶೀಲ್ದಾರರ ಬಳಿ ಇರಬೇಕು. ಅಷ್ಟೂ ಪ್ರಕ್ರಿಯೆಗಳು ನಡೆಸಿರುವ ಸಾಧ್ಯತೆಗಳೇ ಇಲ್ಲ.
ಬಹುಮುಖ್ಯವಾಗಿ ಆರೋಗ್ಯ ಇಲಾಖೆ ಮೂಲಕ ಪೂರ್ವಭಾವಿ ತಪಸಾಣೆ ವರದಿ ಪಡೆದಿದ್ದಾರೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ.

ಈಗಾಗಲೇ ಆಸ್ಪತ್ರೆಗಳ ಹಬ್ ಅನಿಸಿಕೊಂಡಿರುವ ಉಳ್ಳಾಲ ತಾಲೂಕಿನಲ್ಲಿ ಅತಿ ಹೆಚ್ಚು ಜನರಿಗೆ ಕ್ಯಾನ್ಸರ್ ಕಾಯಿಲೆ ಹಾಗೂ ಶ್ವಾಸಕೋಶದ ತೊಂದರೆಗಳು , ಹೃದಯಾಘಾತಗಳಿಂದ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಿದೆ . ಕೊಳಚೆಯುಕ್ತ ನೀರು ಜಲ, ನೆಲ ಸೇರಿ ಮಾನವನ ಜೀವಕ್ಕೆ ಸೇರುವ ಸ್ಥಿತಿ ಈ ಭಾಗದಲ್ಲಿ ನಿರ್ಮಾಣವಾಗಿದೆ. ಸಂವಿಧಾನದ ಪರಿಚ್ಛೇದ 21 ರಂತೆ ಇರುವ ಜನರ ಬದುಕುವ ಹಕ್ಕು ನ್ನು ಕಸಿಯುವ ಕೆಲಸಗಳಾಗುತ್ತಿವೆ. ಇದು ಕೇವಲ ನಿರ್ಲಕ್ಷ್ಯವಲ್ಲ, ನೇರವಾಗಿ ಜನರ ಆರೋಗ್ಯದ ಮೇಲೆ ದಬ್ಬಾಳಿಕೆ ಎಂಬ ಆಕ್ರೋಶ ಕೇಳಿಬಂದಿದೆ.
ಜನರ ಬದುಕಿನ ಮೇಲಿನ ರಾಜಕೀಯ ದಬ್ಬಾಳಿಕೆ:
ಒಂದು ಕಾಲದಲ್ಲಿ ಬಗಂಬಿಲ ಪ್ರದೇಶವು ಸಮೃದ್ದ ಕೃಷಿ ಭೂಮಿ ಹೊಂದಿದ್ದು ಈಗ ರೋಗಗಳ ತಾಣವಾಗಿ ಪರಿಣಮಿಸಿದೆ . ಮಕ್ಕಳಿಗೆ ಶುದ್ಧ ನೀರು ಕನಸಾಗಲಿದೆ. ಪರಿಸರ ಹಾಳಾಗುತ್ತದೆ ಜನರು ಆಸ್ಪತ್ರೆಗಳ ಕಡೆ ಓಡಬೇಕಾಗುತ್ತದೆ ಕಾನೂನು ವ್ಯಾಪ್ತಿ ಮೀರಿದ ತಹಶೀಲ್ದಾರರ ಮತ್ತು ಸಹಾಯಕ ಕಮಿಷನರ್ ಕ್ರಮದ ವಿರುದ್ಧ ಗ್ರಾಮಸ್ಥರು ಉಗ್ರ ಪ್ರತಿಭಟನೆಗಳಿಗೆ ಸಜ್ಜಾಗಿದ್ದಾರೆ.