

ಉಳ್ಳಾಲ: ತಾಲೂಕು ಆಶಾಮೆಂಟರನ್ನು ಕರ್ತವ್ಯದಲ್ಲಿ ಮುಂದುವರೆಸಲು ಒತ್ತಾಯಿಸಿ ಮಂಗಳೂರು ನಗರ ಆಶಾ ಕಾರ್ಯಕರ್ತೆಯರಿಂದ ತೊಕ್ಕೊಟ್ಟು ಕಲ್ಲಾಪುವಿನಲ್ಲಿ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಲಾಯಿತು.
2009ನೇ ಸಾಲಿನಿಂದ ಆಶಾ ಕಾರ್ಯಕರ್ತೆಯರಿಗೆ ಮೂಲಭೂತ ತರಬೇತಿಯನ್ನು ನೀಡಿದ ದಿನದಿಂದ 2025ರ ವರೆಗೆ ಎಲ್ಲಾ ಕೆಲಸ ಕಾರ್ಯಗಳ ಮೇಲ್ವಿಚಾರಣೆಯನ್ನು ಆಶಾ ಮೆಂಟರ್ ಅವರ ಪ್ರೋತ್ಸಾಹದಿಂದ ಕರ್ತವ್ಯ ನಿರ್ವಹಿಸಿದ್ದೇವೆ. ಆದರೆ ಈಗ ಸರಕಾರದಿಂದ ಆಶಾ ಮೆಂಟರ್ ಇವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಬೇಕೆಂಬ ಆದೇಶ ಬಂದಿದೆ. ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದರೆ ಮುಂದೆ ಆಶಾ ಕಾರ್ಯಕರ್ತರನ್ನು ಕೇಳುವವರಿಲ್ಲ ಮತ್ತು ಮುಂದಿನ ದಿನಗಳಲ್ಲಿ ಆಶಾ ಪ್ರೋಗ್ರಾಮ್ ಅನ್ನೇ ತೆಗೆಯಲಾಗುವುದು ಅನ್ನುವ ಮಾತುಗಳಿವೆ. ಆದುದರಿಂದ ಯಾವುದೇ ಕಾರಣಕ್ಕೂ ಆಶಾ ಮೆಂಟರವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸದೇ ಕರ್ತವ್ಯದಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ನಿಯೋಗದಲ್ಲಿ ಆಶಾ ಕಾರ್ಯಕರ್ತರ ಜಿಲ್ಲಾ ಅಧ್ಯಕ್ಷೆ ಗಾಯತ್ರಿ ವಿ ಶೆಟ್ಟಿ, ತಾಲೂಕು ಅಧ್ಯಕ್ಷೆ ಲತಾ, ಕಾರ್ಯದರ್ಶಿ ವಿಶಾಲಾಕ್ಷಿ, ಸುಚಿತ್ರಾ, ಸುಜಾತಾ ಎಸ್, ಆಶಾಲತಾ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಾಸಕ ವೇದವ್ಯಾಸ ಕಾಮತ್ ಹಾಗೂ ಸಂಸದ ಬ್ರಿಜೇಶ್ ಚೌಟ ಅವರಿಗೂ ಈಗಾಗಲೇ ಆಶಾ ಕಾರ್ಯಕರ್ತೆಯರು ಮನವಿ ಸಲ್ಲಿಸಿದ್ದಾರೆ.

