ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೋಟೆಕಾರು: ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಇನ್ನೊಬ್ಬರ ಕಷ್ಟದಲ್ಲಿ ನೆರವಾಗುವ ಎಸ್ ವೈಎಸ್ ಸೆಂಟರಿನ ಕಾರ್ಯ ಶ್ಲಾಘನೀಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಸುನ್ನೀ ಯುವಜನ ಸಂಘ ಕೆ.ಸಿ.ರೋಡು ಘಟಕದ ಆಶ್ರಯದಲ್ಲಿ ಭಾನುವಾರ ಕೋಟೆಕಾರು ಖಾಸಗಿ ಸಭಾಂಗಣದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ದೂರದರ್ಶಿತ್ವದ ಕಾರ್ಯಕ್ರಮ ಇದಾಗಿದ್ದು, ಇಲ್ಲಿ ಮದುವೆಯಾದವರು ಮುಂದೆ ಕುಟುಂಬ ನಿರ್ವಹಣೆಯನ್ನು ಸರಿಯಾಗಿ ನಿರ್ವಹಿಸಿ ಮತ್ತೆ ಇನ್ನೊಬ್ಬರ ಬಾಳಿನಲ್ಲಿ ಬೆಳಕಾಗುವ ರೀತಿಯಲ್ಲಿ ಬಾಳುವಂತಾಗಬೇಕು ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುನ್ನೀ ಯುವಜನ ಸಂಘದ ರಾಜ್ಯಾಧ್ಯಕ್ಷ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಮಾತನಾಡಿ ಸಾಂತ್ವನ ಯೋಜನೆಯಡಿ ಬಡ ಹೆಣ್ಮಕ್ಕಳ ಮದುವೆ, ಆರ್ಥಿಕವಾಗಿ ಹಿಂದುಳಿದವರಿಗೆ ಮನೆ ಕಟ್ಟುವ ಸಾಮಾಜಿಕ ಕೆಲಸ ಎಸ್‍ವೈಎಸ್ ಮಾಡುತ್ತಿದೆ .ಯುವಕರಲ್ಲಿ ಧಾರ್ಮಿಕ ಜ್ಞಾನ ಮೂಡಿಸಿ ಬಲಿಷ್ಟಗೊಳಿಸುವ ಉದ್ದೇಶ ಸಂಘಟನೆ ಹೊಂದಿದ್ದು ಇತರ ಸಾಮಾಜಿಕ ಸೇವೆಗಳನ್ನು ಸಾಂತ್ವನ ಯೋಜನೆಯಡಿ ನಡೆಸಲಾಗುತ್ತಿದೆ. ಇಂದು ಆರ್ಥಿಕವಾಗಿ ಜಗತ್ತೇ ಸಂಕಷ್ಟದಲ್ಲಿದ್ದು ಇಂತಹ ಸಂದರ್ಭದಲ್ಲಿ ಹೆಣ್ಮಕ್ಕಳ ವಿವಾಹ ನಡೆಸುವುದು ಹೆತ್ತವರಿಂದ ಅಸಾಧ್ಯ ಎನಿಸಿದೆ. ಮಸೀದಿ ಹಾಗೂ ಜಮಾಅತ್ ಸಮಿತಿಗಳು ವ್ಯಾಪ್ತಿಯಲ್ಲಿರುವ ಮದರಸಗಳನ್ನೇ ಮುನ್ನಡೆಸಲು ಕಷ್ಟಪಡುತ್ತಿದ್ದು ಇಂತಹ ಸಂದರ್ಭದಲ್ಲಿ ದಾನಿಗಳ ನೆರವಿನಿಂದ ಬಡ ಹೆಣ್ಮಕ್ಕಳಿಗೆ ವಿವಾಹ ಮಾಡುವಲ್ಲಿ ಎಸ್‍ವೈಎಸ್ ಯಶಸ್ವಿಯಾಗಿದೆ ಎಂದರು.
ಹಿದಯಾತ್ ನಗರ ಅಲ್ ಹಿದಾಯ ಜುಮ್ಮಾ ಮಸೀದಿ ಖತೀಬ್ ಅಸ್ಸಯ್ಯದ್ ಸಿ.ಟಿ.ಎಂ.ಅಲೀಂ ಪೂಕೋಯ ತಂಙಳ್ ದುವಾ ನೆರವೇರಿಸಿದರು. ಮಾಣಿ ದಾರುಲ್ ಇರ್ಷಾದ್ ಎಜ್ಯುಕೇಶನ್ ಸೆಂಟರ್ ಅಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ವಿವಾಹದ ನೇತೃತ್ವ ವಹಿಸಿದ್ದರು. ಜಿಲ್ಲಾ ವಕ್ಫ್ ಅಧ್ಯಕ್ಷ ಎಸ್‍ಎಂಆರ್ ರಶೀದ್, ಎಸ್‍ಜೆಎಂ ತಲಪಾಡಿ ವಲಯಾಧ್ಯಕ್ಷ ಇಬ್ರಾಹಿಂ ಮದನಿ ತಲಪಾಡಿ, ಅಬ್ದುಲ್ ಹಕೀಂ ಮದನಿ ಉಚ್ಚಿಲ, ಕೆ.ಸಿ.ರೋಡ್ ಮಸೀದಿ ಮುದರ್ರಿಸ್ ಮುನೀರ್ ಸಖಾಫಿ, ಎಸ್‍ವೈಎಸ್ ಮದುವೆ ಸಮಿತಿ ಅಧ್ಯಕ್ಷ ಯು.ಬಿ.ಮಹಮ್ಮದ್ ಹಾಜಿ, ತಾ.ಪಂ.ಸದಸ್ಯ ಸಿದ್ದೀಕ್ ತಲಪಾಡಿ, ಡಾ.ಅಬ್ದುಲ್ ಖಾದರ್ ಹಾಜಿ ತಲಪಾಡಿ, ಎಸ್‍ಎಂಎ ತಲಪಾಡಿ ಅಧ್ಯಕ್ಷ ಬಾವ ಹಾಜಿ ಪಂಜಾಳ, ಎಸ್‍ಎಸ್‍ಎಫ್ ತಲಪಾಡಿ ಘಟಕಾಧ್ಯಕ್ಷ ಅಬ್ದುಲ್ ಹಕೀಂ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಬಳಿಕ ಸಂಘಟನೆಯ ಮಹತ್ವ ವಿಚಾರದಲ್ಲಿ ನಡೆದ ಅಧ್ಯಯನ ಶಿಬಿರದಲ್ಲಿ ಹಂಝ ಮದನಿ ಮಿತ್ತೂರು ವಿಷಯ ಮಂಡಿಸಿದರು. ಸಾಮೂಹಿಕ ವಿವಾಹದಲ್ಲಿ ಖತೀಜತ್ತುಲ್ ಕುಬ್ರಾ-ನಸ್ರುಲ್ಲಾ ಹಾಗೂ ಉಮೈರಾ ಬಾನು-ಸಯ್ಯದ್ ಅಬ್ದುಲ್ಲಾ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಎಸ್‍ವೈಎಸ್ ಕೆ.ಸಿ.ರೋಡು ಘಟಕಾಧ್ಯಕ್ಷ ಎನ್.ಎಸ್.ಉಮ್ಮರ್ ಮಾಸ್ಟರ್ ಪ್ರಾಸ್ತಾವಿಕವಾಗಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಪಲ್ಲ ವಂದಿಸಿದರು.




