ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕಿನ್ಯ: ಸಾಮರಸ್ಯ ಮತ್ತು ಸೌಹಾರ್ದತೆಗೆ ಶಾಲೆಯೇ ಮೊದಲ ಪಾಠಶಾಲೆ, ಈ ಮೂಲಕ ಸಮಾಜದಲ್ಲಿ ನೆಮ್ಮದಿಯ ವಾತಾವರಣ ಮೂಡಿಸಬಹುದು ಎಂದು ತೊಕ್ಕೊಟ್ಟು ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಧರ್ಮ ಕೇಂದ್ರದ ಧರ್ಮಗುರು ಫಾ. ಡಾ.ಜೆ.ಬಿ ಸಲ್ದಾನ ಅಭಿಪ್ರಾಯಪಟ್ಟರು.
ಕಿನ್ಯ ಬೆಳರಿಂಗೆ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಪುನ:ಪ್ರತಿಷ್ಠೆ, ಬ್ರಹ್ಮಕಲಶ ಮತ್ತು ಧರ್ಮನೇಮದ ಪ್ರಯುಕ್ತ ಮಂಗಳವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಪ್ರತಿಯೊಂದು ಧರ್ಮದ ಧಾರ್ಮಿಕ ಶುಭ ಸಮಾರಂಭಗಳಲ್ಲಿ ಎಲ್ಲ ಧರ್ಮೀಯರು ಸಮಾನವಾಗಿ ಪಾಲ್ಗೊಳ್ಳುವ ಮೂಲಕ ಕೋಮು ಸೌಹಾರ್ದತೆಯ ಜೊತೆಗೆ ಸಾಮರಸ್ಯ ವಾತಾವರಣ ಮೂಡಲು ಸಾಧ್ಯ. ಮಕ್ಕಳಿಗೆ ಶಾಲೆಯಲ್ಲಿ ಸೌಹಾರ್ದತೆಯ ಪಾಠ ಸಿಕ್ಕಾಗ ಶಿಕ್ಷಕರು ಉದಾತ್ತ ನೀತಿ ಬೋಧನೆ ಮಾಡುವುದರಿಂದ ಪರಿಸರ ಪ್ರಶಾಂತವಾಗಿರುತ್ತದೆ. ಆ ನಿಟ್ಟಿನಲ್ಲಿ ಕಿನ್ಯ ಬೆಳರಿಂಗೆಯ ಶ್ರೀ ಮಲರಾಯ ಧೂಮವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಧಾರ್ಮಿಕ ಸಭೆಯಲ್ಲಿ ಅನ್ಯ ಧರ್ಮೀಯರನ್ನು ಆಮಂತ್ರಿಸುವ ಮೂಲಕ ಶ್ಲಾಘನೀಯ ಕಾರ್ಯ ಮಾಡಿದ್ದಾರೆ ಎಂದರು.
ಬಂಟ್ವಾಳ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಶೇಷಪ್ಪ ಕೋಟ್ಯಾನ್ ಧಾರ್ಮಿಕ ಸಭೆ ಉದ್ಘಾಟಿಸಿದರು.
ಕಿನ್ಯ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಜನಾಬ್ ಸಾಧು ಕುಂಞ ಮಾಸ್ತರ್ ಮಾತನಾಡಿ ಕಿನ್ಯ ಗ್ರಾಮದಲ್ಲಿ ಇಲ್ಲಿಯವರೆಗೂ ಎಲ್ಲ ಧರ್ಮಗಳ ಜನರ ನಡುವೆ ದೃಢವಾದ ಸಾಮರಸ್ಯತೆ ನೆಲೆಸಿದೆ. ಸಮಾಜಕ್ಕೆ ಅಪ್ರಿಯವಾದ ಸಣ್ಣಪುಟ್ಟ ಘಟನೆಗಳು ನಡೆದಾಗ ಹಿರಿಯರ ಸಮಕ್ಷಮದಲ್ಲಿ ಮಾತುಕತೆಯಿಂದಲೇ ಶಮನಗೊಳಿಸುವ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿದ್ದು ಕಿನ್ಯ ಸೌಹಾರ್ದತೆಯ ನೆಲೆವೀಡಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರಕ್ಕೆ ಸ್ಥಳದಾನಗೈದ ದಾನಿಗಳಾದ ಸೀತಮ್ಮ ಭಂಡಾರಮನೆ, ಈಶ್ವರ ಪೂಜಾರಿ ಭಂಡಾರ ಮನೆ, ಮೋಹನ್ ಪೂಜಾರಿ ಭಂಡಾರಮನೆ, ಸದಾಶಿವ ಪೂಜಾರಿ ಭಂಡಾರಮನೆ ಹಾಗೂ ಯಾದವ ಪೂಜಾರಿ ಭಂಡಾರಮನೆ ಅವರನ್ನು ಸನ್ಮಾನಿಸಲಾಯಿತು.
ಕಿನ್ಯ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಯುವಕ ಮಂಡಲದ ಅಧ್ಯಕ್ಷ ಮಹಾಬಲ ಪೂಂಜಾ ಸಾಂತ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್ನ ಗೌರವಾಧ್ಯಕ್ಷ ಕೆ.ಟಿ. ಸುವರ್ಣ, ಅಧ್ಯಕ್ಷ ಬಾಬು ಶಾಸ್ತ ಕಿನ್ಯ, ಕಾರ್ಯಾಧ್ಯಕ್ಷ ಕೆ.ಪಿ. ಸುರೇಶ್, ಟ್ರಸ್ಟಿ ಎ.ಜೆ. ಶೇಖರ್, ಕಿನ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಿನಿ ನಾರಾಯಣ ಪೂಜಾರಿ, ಉಪಾಧ್ಯಕ್ಷ ಸಿರಾಜ್ ಕಿನ್ಯ, ಮಾಜಿ ಅಧ್ಯಕ್ಷರುಗಳಾದ ಕೆ.ಹೆಚ್. ಹುಸೈನ್ ಕುಂಞ ಹಾಜಿ, ಹಮೀದ್ ಕಿನ್ಯ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕೆ.ಬಿ. ಅಬೂಸಾಲಿ, ಕೆ.ಎ. ಮಹಮ್ಮದ್ ಕಿನ್ಯ, ಫಾರೂಕ್ ಕಿನ್ಯ, ಆಶಾಲತಾ ಆನಂದ ಸಂಕೇಶ್, ಕುಸುಮ ಕೊರಗಪ್ಪ ಉಕ್ಕುಡ, ಬಾಗಿ ಲಿಂಗಪ್ಪ, ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಎಂ.ಎ. ಮಹಮ್ಮದ್ ಬಶೀರ್, ಕಿನ್ಯ ಕೇಂದ್ರ ಜುಮ್ಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಅಬೂಸಾಲಿ ಕುರಿಯಕ್ಕಾರು ಹಾಗೂ ನಿವೃತ್ತ ಕೃಷಿ ಅಧಿಕಾರಿ ಕೆ.ಎಸ್.ಸಾಧು ಕುಂಞ ಸಾಗ್ ಮೊದಲಾದವರು ಉಪಸ್ಥಿತರಿದ್ದರು.
ಕಿನ್ಯ ಬೆಳರಿಂಗೆ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಬ್ರಹ್ಮಕಲಶ ಹಾಗೂ ಧರ್ಮನೇಮ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಕಿನ್ಯ ವಂದಿಸಿದರು. ಭಾಸ್ಕರ್ ನಾಟೆಕಲ್ ಮತ್ತು ರಮೇಶ್ ಆಳ್ವ ದೇವಿಪುರ ಕಾರ್ಯಕ್ರಮ ನಿರೂಪಿಸಿದರು.


