ಮಂಗಳೂರು, ಮಾ. 02 : ಇಸ್ರೇಲ್-ಅಮೆರಿಕಾ ದಾಳಿಗೆ ಪ್ರತಿಯಾಗಿ ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕಾದ ಸೇನಾ ನೆಲೆ ಹಾಗೂ ಇತರ ಕೆಲವು ಸ್ಥಳಗಳ ಮೇಲೆ ಇರಾನ್ ನಡೆಸಿರುವ ದಾಳಿಯಿಂದಾಗಿ ಅಲ್ಲಿ ನೆಲೆಸಿರುವ ಕರಾವಳಿಗರಲ್ಲಿ ಗೊಂದಲ, ಆತಂಕ ಮುಂದುವರಿದಿದೆ. ಆದರೆ ಸದ್ಯ ದೊಡ್ಡ ಅಪಾಯ ಕಂಡುಬಂದಿಲ್ಲ. ವಿಮಾನ ಸಂಚಾರ ಸ್ಥಗಿತವಾಗಿರುವುದರಿಂದ ಸಮಸ್ಯೆಯಾಗಿದೆ. ಉಳಿದಂತೆ ತುಂಬಾ ಸಮಸ್ಯೆಯಾಗಿಲ್ಲ ಎಂದು ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಅನೇಕ ಮಂದಿ ಕರಾವಳಿಗರು ಪ್ರತಿಕ್ರಿಯಿಸಿದ್ದಾರೆ.

ಇನ್ನು ಕೆಲವರು ಪರಿಸ್ಥಿತಿ ಹೀಗೆ ಮುಂದುವರಿದರೆ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಇನ್ನು ಕುವೈಟ್‌ನಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಏರ್‌ಪೋರ್ಟ್ ಬಂದ್ ಇದೆ. ಉಳಿದಂತೆ ಜನಜೀವನ ಸಹಜವಾಗಿಯೇ ಇದೆ. ಯಾರೂ ಆತಂಕಪಡಬೇಕಾಗಿಲ್ಲ ಎಂದು ಮೂಲತಃ ಸುರತ್ಕಲ್‌ನವರಾಗಿದ್ದು ಕುವೈತ್‌ನಲ್ಲಿ ನೆಲೆಸಿರುವ ಭಾರತೀಯ ಪ್ರವಾಸಿ ಪರಿಷತ್‌ನ ಸಂಚಾಲಕ ರಾಜ್ ಭಂಡಾರಿ ತಿಳಿಸಿದ್ದಾರೆ. ಪದೇ ಪದೇ ಸೈರನ್ ಹಾಕಲಾಗುತ್ತಿದ್ದು ಇದು ಎಚ್ಚರಿಕೆಯ ಸೈರನ್ ಗಳಲ್ಲ. ಬದಲಾಗಿ ಕುವೈಟ್ ಸುರಕ್ಷಿತವಾಗಿದೆ ಎಂದು ತಿಳಿಸುವ ಸೈರನ್ ಸದ್ದು. ಸದ್ಯ ಇಲ್ಲಿ ಆಹಾರ ವಸ್ತುಗಳ ಕೊರತೆ ಇಲ್ಲ. ಸರಕಾರ ಕೂಡ ಉತ್ತಮವಾಗಿ ಸ್ಪಂದಿಸುತ್ತಿದೆ. ಕುವೈಟ್‌ನಲ್ಲಿ ಸುಮಾರು 10.05 ಲಕ್ಷ ಮಂದಿ ಭಾರತೀಯರಿದ್ದಾರೆ.. ಕುವೈಟ್‌ನಲ್ಲಿರುವವರು, ಊರಿನಲ್ಲಿರುವ ಅವರ ಮನೆಯವರು ಯಾವುದೇ ಗೊಂದಲ, ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.


