ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕಿನ್ಯ: ಕಿನ್ಯ ಬೆಳರಿಂಗೆಯ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಪುನ:ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ, ಧರ್ಮನೇಮೋತ್ಸವದ ಅಂಗವಾಗಿ ತಲಪಾಡಿ ದೇವಿಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಕಿನ್ಯ ಬೆಳರಿಂಗೆಯ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ದೈವಸ್ಥಾನದವರೆಗೆ ನಡೆದ ಹೊರೆ ಕಾಣಿಕೆ ಮೆರವಣಿಗೆಗೆ ಮುಸ್ಲಿಮರು ತಂಪು ಪಾನೀಯ ನೀಡುವುದರ ಮೂಲಕ ಸಾಮರಸ್ಯ ಮೆರೆದದರು.
ಕಿನ್ಯಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿರಾಜ್ ಕಿನ್ಯಾ ನೇತೃತ್ವದಲ್ಲಿ ಹೊರೆಕಾಣಿಕೆಯಲ್ಲಿ ಪಾಲ್ಗೊಂಡವರಿಗೆ ತಂಪು ಪಾನೀಯ ನೀಡಲಾಯಿತು. ಹಲವು ಕಿ.ಮೀ ನಡೆಯುತ್ತಾ ಸಾಗಿದ ಹಿಂದೂ ಭಕ್ತಾಧಿಗಳಿಗೆ ತಂಪು ಪಾನೀಯವನ್ನು ವಿತರಿಸಲಾಯಿತು. ಪ್ರತೀ ಎಲ್ಲಾ ಜಾತಿ ಧರ್ಮದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರ ಮುಖೇನ ಭಾಗದ ಜನ ಸೌಹಾರ್ದತೆ ಜತೆಗೆ ಪ್ರೀತಿಯಿಂದ ಬದುಕುತ್ತಿದ್ದೇವೆ. ಇಂತಹ ಸಂಬಂಧವನ್ನು ಗಟ್ಟಿಗೊಳಿಸುವುದು ಇಂತಹ ಕಾರ್ಯಕ್ರಮಗಳಿಂದ ಸಾಧ್ಯ ಎಂದು ಸಿರಾಜ್ ಹೇಳಿದರು.
ಈ ವೇಳೆ ಕಿನ್ಯಾ ಗ್ರಾ. ಪಂ ಸದಸ್ಯರಾದ ಮಹಮ್ಮದ್, ಅಬುಸಾಲಿ, ಮಹಾಬಲ ಪೂಂಜಾ, ಫಾರುಕ್ ಕಿನ್ಯಾ ಮೊದಲಾದವರು ತಂಪುಪಾನೀಯ ಹಂಚುವ ನೇತೃತ್ವ ವಹಿಸಿದ್ದರು.
ಶ್ರೀ ಕ್ಷೇತ್ರ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಬಾಲಕೃಷ್ಣ ಭಟ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಮಲರಾಯ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಾಬು ಶ್ರೀಶಾಸ್ತ ಕಿನ್ಯ, ಗೌರವಾಧ್ಯಕ್ಷ ಕೆ.ಟಿ. ಸುವರ್ಣ, ಕಾರ್ಯಾಧ್ಯಕ್ಷ ಕೆ.ಪಿ. ಸುರೇಶ್, ಬ್ರಹ್ಮಕಲಶ ಮತ್ತು ಧರ್ಮನೇಮ ಸಮಿತಿ ಅಧ್ಯಕ್ಷ ಕೃಷ್ಣ ಶಿವಕೃಪಾ ಕುಂಜತ್ತೂರು, ಜೀಣೋದ್ಧಾರ ಸಮಿತಿ ಕೋಶಾಧಿಕಾರಿ ವಾಮನ ಪೂಜಾರಿ ಬೆಳರಿಂಗೆ, ಉದ್ಯಮಿ ಭಾಸ್ಕರ ಮುಂಬಯಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಕಿನ್ಯ, ಟ್ರಸ್ಟಿ ಎ.ಜೆ.ಶೇಖರ್, ಸತೀಶ್ ಕರ್ಕೇರ, ಶ್ರೀ ಕ್ಷೇತ್ರ ತಲಪಾಡಿಯ ಮಾಜಿ ಆಡಳಿತ ಮೊಕ್ತೇಸರ ರಾಮ್ಮೋಹನ್ರೈ, ಭಾಸ್ಕರ ಮಂಜನಾಡಿ, ಮಹಾಬಲ ಪೂಂಜಾ, ಮಹಿಳಾ ಸಮಿತಿಯ ಮಾಲಿನಿ ನಾರಾಯಣ ಪೂಜಾರಿ, ಸುರೇಖಾ ಚಂದ್ರಹಾಸ್ ಮತ್ತಿತರರು ಉಪಸ್ಥಿತರಿದ್ದರು.






