ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕುತ್ತಾರು: ದಿನನಿತ್ಯ ವಾಹನ ಸವಾರರಿಗೆ ಅಲ್ಲಿಂದ ಹಾದುಹೋಗುವುದು ತೀರಾ ಕಷ್ಟ, ಪಾದಚಾರಿಗಳಿಗಂತೂ ಹೋಗುವುದೇ ಅಸಾಧ್ಯ. ಆದರೂ ಮೂಗುಮುಚ್ಚಿಕೊಂಡೇ ಮುಂದೆ ಸಾಗುವ ಅನಿವಾರ್ಯತೆ ಎಲ್ಲರಿಗೂ ಇದೆ.
ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಕುತ್ತಾರು ಪ್ರದೇಶದಲ್ಲಿ ವಸತಿ ಸಂಕೀರ್ಣಗಳು, ವಾಣಿಜ್ಯ ಕಟ್ಟಡಗಳು , ಅಂಗಡಿ, ಮನೆ ಎಲ್ಲವೂ ಅಧಿಕ ಸಂಖ್ಯೆಯಲ್ಲಿ ತಲೆ ಎತ್ತಿನಿಂತಿದೆ. ಆದರೆ ವಿಪರ್ಯಾಸವೆಂದರೆ ಅಷ್ಟೂ ಕಟ್ಟಡಗಳಲ್ಲಿನ ಜನ ಉಪಯೋಗಿಸಿ ಬಿಸಾಡಿದ ಸೊತ್ತುಗಳಿಗೆ ಮುಕ್ತಿ ದೊರಕಿಸಲು ಯಾವುದೇ ವ್ಯವಸ್ಥೆಯಿಲ್ಲ. ಸಂಬಂಧಪಟ್ಟ ಪಂಚಾಯಿತಿ ಕೂಡಾ ಸರಕಾರದ ಅನುದಾನವಿಲ್ಲವೆಂದು ಕೈಚೆಲ್ಲಿ ನಿಂತಿದೆ.
ಇದನ್ನು ಸವಾಲಾಗಿ ಸ್ವೀಕರಿಸಿದ ಮುನ್ನೂರು ಪಂಚಾಯಿತಿ ಅಧ್ಯಕ್ಷೆ ರೂಪಾ.ಆರ್.ಶೆಟ್ಟಿ ಅವರು ಹಲವು ಸಮಯದಿಂದ ಕುತ್ತಾರು ಜಂಕ್ಷನ್ನಿನಲ್ಲಿ ಎಚ್ಚರಿಕೆ ಫಲಕವಿದ್ದರೂ ತುಂಬಿದ್ದ ಕಸದ ರಾಶಿಯನ್ನು ಖುದ್ದು ತಾವೇ ಶುಚಿಗೊಳಿಸಲು ಮುಂದಾಗಿರುವ ಪ್ರಸಂಗ ಇತ್ತೀಚೆಗೆ ನಡೆಯಿತು. ನಾಲ್ಕು ವಸತಿ ಸಂಕೀರ್ಣಗಳು, ದೇವಸ್ಥಾನ , ಟೈಲ್ಸ್ ಕಾರ್ಖಾನೆ, ಶಾಲೆ ಇರುವ ಕುತ್ತಾರು ಜಂಕ್ಷನ್ನಿನ ರಸ್ತೆ ಬದಿಯಲ್ಲೇ ಕಸದ ರಾಶಿ ಬೆಟ್ಟದಂತೆ ತಲೆ ಎತ್ತಿ ನಿಂತಿದೆ. ಸ್ಥಳೀಯ ಹೊಟೇಲು, ಅಂಗಡಿ, ವಸತಿ ಸಂಕೀರ್ಣದವರು ಅಲ್ಲೇ ಪ್ಲಾಸ್ಟಿಕ್ ಚೀಲಗಳನ್ನು ಎಸೆದು ಪರಿಸರವನ್ನೇ ಮಲಿನಗೊಳಿಸಿದ್ದಾರೆ. ಹಲವಾರು ವರ್ಷಗಳಿಂದ ಇರುವ ಸಮಸ್ಯೆಗೆ ಪಂಚಾಯಿತಿ ವತಿಯಿಂದ ಹಲವು ಬಾರಿ ಎಚ್ಚರಿಕೆ ಫಲಕವನ್ನು ಹಾಕಲಾಗಿತ್ತು. ಅದನ್ನು ಗಣನೆಗೆ ತೆಗೆದುಕೊಳ್ಳದ ಜನ ಅಲ್ಲೇ ಕಸವನ್ನು ಎಸೆಯುತ್ತಲೇ ಬಂದಿದ್ದಾರೆ.
ಸದ್ಯ ಬೆಟ್ಟದಂತೆ ಇದ್ದ ಕಸದ ರಾಶಿಗೆ ಮುನ್ನೂರು ಪಂಚಾಯಿತಿ ಅಧ್ಯಕ್ಷೆ ರೂಪಾ.ಆರ್. ಶೆಟ್ಟಿ ಅವರು ಓರ್ವ ಯುವಕನ ಸಹಕಾರದೊಂದಿಗೆ ಸೇರಿಕೊಂಡು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಗುಡಿಸಿ ಬೆಂಕಿ ಇಟ್ಟು ಪರಿಸರವನ್ನು ಶುಚಿಗೊಳಿಸಿದ್ದಾರೆ. ಜನ ಕಸದ ರಾಶಿಯಿಂದ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಪಂಚಾಯಿತಿಗೆ ಬರುವ ಅನುದಾನದಲ್ಲಿ ವಿಲೇವಾರಿ ನಡೆಸಲು ಸಾಧ್ಯವಾಗುತ್ತಿಲ್ಲ. ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಅದನ್ನು ಬೆಂಕಿ ಹಾಕಿದ್ದೇವೆ. ಮುಂದೆ ಜನ ಕಸಗಳನ್ನು ಇಲ್ಲಿ ಹಾಕದಂತೆ ಎಚ್ಚರವಹಿಸಿ, ಮನೆಯಲ್ಲೇ ಅದಕ್ಕೆ ಮುಕ್ತಿ ಕಾಣಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.













