ಉಡುಪಿ, ಮಾ. 23: ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷವು ಕರ್ನಾಟಕದ ಕರಾವಳಿ ಭಾಗದ ಮೀನುಗಾರರ ಮೇಲೆ ತೀವ್ರ ಪರಿಣಾಮ ಬೀರಿದೆ. ಹೋಟೆಲ್ ಬಂದ್ ಮತ್ತು ರಫ್ತು ಸ್ಥಗಿತದಿಂದಾಗಿ ಮೀನಿನ ದರ ಕುಸಿದಿದ್ದು, ಮೀನುಗಾರಿಕೆ ಉದ್ಯಮವು ಸಂಕಷ್ಟದಲ್ಲಿ ಸಿಲುಕಿದೆ.

ಏಷ್ಯಾದ ಅತಿದೊಡ್ಡ ಮೀನುಗಾರಿಕಾ ಬಂದರುಗಳಲ್ಲಿ ಒಂದಾದ ಮಲ್ಪೆಯಲ್ಲಿ ಮೀನುಗಾರಿಕೆ ಉದ್ಯಮವು ತೀವ್ರ ಸಂಕಷ್ಟ ಎದುರಿಸುತ್ತಿದೆ. ಯುದ್ಧದ ಹಿನ್ನೆಲೆಯಲ್ಲಿ ಮೀನು ರಫ್ತು ಸ್ಥಗಿತಗೊಂಡಿರುವುದು ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದಾಗಿ ಹೋಟೆಲ್‌ಗಳು ಮುಚ್ಚಿರುವುದು ಮೀನಿನ ಬೆಲೆ ದಿಢೀರ್ ಕುಸಿಯಲು ಕಾರಣವಾಗಿದೆ. ಮಾರುಕಟ್ಟೆ ಮೂಲಗಳ ಪ್ರಕಾರ, ಮೀನಿನ ತಳಿಗಳಿಗೆ ಅನುಗುಣವಾಗಿ ಪ್ರತಿ ಕೆಜಿಗೆ 50 ರೂ. ನಿಂದ 200 ರೂ. ವರೆಗೆ ಬೆಲೆ ಇಳಿಕೆಯಾಗಿದೆ.ಈ ಬಿಕ್ಕಟ್ಟಿನಿಂದ ಮಹಿಳಾ ಮೀನು ಮಾರಾಟಗಾರರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ. “ಕೇರಳ ಮೂಲದ ವ್ಯವಹಾರಗಳಿಗಾಗಿ ಮಲ್ಪೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಮೀನು ಖರೀದಿಸುತ್ತಿದ್ದ ಹೋಟೆಲ್‌ಗಳು ಈಗ ಮುಚ್ಚಲ್ಪಟ್ಟಿವೆ. ಇದರಿಂದ ಮೀನಿನ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ‘ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವು ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ಇದು ಪರೋಕ್ಷವಾಗಿ ಮೀನುಗಾರಿಕಾ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ. ಯುದ್ಧ ಮುಗಿದರೆ ಸಾಕು, ಮರಳಿ ಜೀವನ ಮೊದಲಿನಂತಾಗಲಿ’ ಎಂದು ಸ್ಥಳೀಯ ಮಾರಾಟಗಾರರು ಅಳಲು ತೋಡಿಕೊಂಡಿದ್ದಾರೆ.ಉಡುಪಿ ನಗರದಲ್ಲಿ ಸುಮಾರು ಹತ್ತು ಸಗಟು ವ್ಯಾಪಾರಿಗಳು ಮತ್ತು ನೂರಾರು ಮಹಿಳೆಯರು ಮೀನು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್‌ಪಿಜಿ ಅಭಾವದಿಂದ ಜಿಲ್ಲೆಯ ಅನೇಕ ಹೋಟೆಲ್‌ಗಳು ಮುಚ್ಚಿವೆ.
ಕಾರ್ಯನಿರ್ವಹಿಸುತ್ತಿರುವ ಕೆಲವೇ ಹೋಟೆಲ್‌ಗಳು ಸಹ ಕಡಿಮೆ ಪ್ರಮಾಣದಲ್ಲಿ ಮೀನು ಖರೀದಿಸುತ್ತಿವೆ. ಕೆಲವು ಕಡೆಗಳಲ್ಲಿ ಮಣ್ಣಿನ ಒಲೆಗಳ ಮೇಲೆ ಅಡುಗೆ ಮಾಡಲಾಗುತ್ತಿದೆ, ಆದರೆ ಇತ್ತೀಚಿನ ರಾತ್ರಿ ಮಳೆಯು ಈ ಪ್ರಯತ್ನಕ್ಕೂ ಅಡ್ಡಿಯುಂಟುಮಾಡಿದೆ.ಉಡುಪಿಯಿಂದ ಶಿರ್ವ, ಕಾಪು, ಕಾರ್ಕಳ, ಬೆಂಗಳೂರು ಮತ್ತು ಕೇರಳದಂತಹ ನಗರಗಳಿಗೆ ಮೀನು ಪೂರೈಕೆಯಾಗುತ್ತದೆ. ಈ ಭಾಗಗಳಲ್ಲಿ ಹೋಟೆಲ್‌ಗಳು ಮುಚ್ಚಿರುವುದರಿಂದ ಬೇಡಿಕೆ ಕುಸಿದಿದ್ದು, ವಿತರಣಾ ಜಾಲದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಎಲ್‌ಪಿಜಿ ದರ ಏರಿಕೆ ಹಾಗೂ ಪೂರೈಕೆಯಲ್ಲಿ ವ್ಯತ್ಯಯದಿಂದಾಗಿ ಕೆಲವು ಹೋಟೆಲ್‌ಗಳು ನಷ್ಟವನ್ನು ಸರಿದೂಗಿಸಲು ಮೀನಿನ ಖಾದ್ಯಗಳ ಬೆಲೆಯನ್ನು ಏರಿಸಿವೆ.ಪ್ರಸ್ತುತ ವಿವಿಧ ತಳಿಯ ಮೀನುಗಳ ಪ್ರತಿ ಕೆಜಿ ಬೆಲೆಯಲ್ಲಿ ಸಲ್ಪ ವ್ಯತ್ಯಾಸ ಕಂಡುಬಂದಿದೆ. ಮಾಂಜಿ ಬೆಲೆಯು 1,550 ರೂಪಾಯಿಯಿಂದ 1,400 ರೂಪಾಯಿಗೆ ಇಳಿಕೆಯಾಗಿದೆ. ಅಂಜಲ್ ಮೀನು 1,100 ರೂ. ನಿಂದ 1,000 ರೂಪಾಯಿಯ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ಬಂಗುಡೆ 300 ರೂ. ನಿಂದ 260 ರೂಪಾಯಿಯ ದರದಲ್ಲಿ ಲಭ್ಯವಿದ್ದರೆ, ಡಿಸ್ಕೋ ಫಿಶ್ ಬೆಲೆಯು 180 ರೂ. ನಿಂದ 140 ರೂಪಾಯಿಗೆ ತಲುಪಿದೆ. ರಾಣಿ ಮೀನು 280 ರೂ. ನಿಂದ 245 ರೂಪಾಯಿಯ ಆಸುಪಾಸಿನಲ್ಲಿ ಮಾರಾಟವಾಗುತ್ತಿದ್ದು, ಸೀಗಡಿ ಬೆಲೆಯು ಪ್ರಸ್ತುತ ಪ್ರತಿ ಕೆಜಿಗೆ 340 ರೂ. ನಿಂದ 320 ರೂಪಾಯಿ ಇದೆ.”ಹೆಚ್ಚಿನ ಮಾಂಸಾಹಾರಿ ಹೋಟೆಲ್‌ಗಳು ಮುಚ್ಚಿರುವುದರಿಂದ ಬೇಡಿಕೆ ಗಣನೀಯವಾಗಿ ಕಡಿಮೆಯಾಗಿದೆ. ಸಗಟು ವ್ಯಾಪಾರಿಗಳಷ್ಟೇ ಅಲ್ಲದೆ, ಪ್ರತಿಯೊಬ್ಬ ಮಹಿಳಾ ಮಾರಾಟಗಾರರೂ ಹೋಟೆಲ್ ಗ್ರಾಹಕರನ್ನು ಅವಲಂಬಿಸಿದ್ದರು. ಈಗ ವ್ಯವಹಾರ ಸಂಪೂರ್ಣ ಸ್ಥಗಿತಗೊಂಡಂತಿದೆ” ಎಂದು ಸ್ಥಳೀಯ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

