ಬೆಂಗಳೂರು, ನ.28: ಮಾದಕ ವಸ್ತು ನಿಯಂತ್ರಣ ಬ್ಯೂರೋದ (ಎನ್ಸಿಬಿ) ಬೆಂಗಳೂರು ವಲಯದ ಅಧಿಕಾರಿಗಳು ಶುಕ್ರವಾರ ಸುಮಾರು 117 ಕೋಟಿ ರೂಪಾಯಿ ಮೌಲ್ಯದ 59.8 ಕೆಜಿ ಹೆರಾಯಿನ್ ನಾಶಗೊಳಿಸಿದ್ದಾರೆ.

ವಿಚಾರಣೆ ಪೂರ್ಣಗೊಂಡಿದ್ದ ಮೂರು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದ ಈ ಮಾದಕ ವಸ್ತುಗಳನ್ನು ನಾಶ ಮಾಡಲಾಗಿದೆ. ಇದರೊಂದಿಗೆ ಈ ವರ್ಷ ಬೆಂಗಳೂರು ವಲಯದಲ್ಲಿ ವಿಲೇವಾರಿ ಮಾಡಲಾದ ಒಟ್ಟು ಮಾದಕ ವಸ್ತುಗಳ ಪ್ರಮಾಣ 2,086 ಕೆಜಿಗೆ ತಲುಪಿದೆ. ತುಮಕೂರು ರಸ್ತೆಯ ದಾಬಸ್ಪೇಟೆಯಲ್ಲಿರುವ ಕರ್ನಾಟಕ ವೇಸ್ಟ್ ಮ್ಯಾನೇಜ್ಮೆಂಟ್ ಘಟಕದಲ್ಲಿ ಮಾದಕ ವಸ್ತುಗಳನ್ನು ಸುಟ್ಟು ನಾಶಗೊಳಿಸಲಾಯಿತು. ಮಾದಕ ದ್ರವ್ಯಗಳು ಮತ್ತು ಅಮಲು ಪದಾರ್ಥಗಳ ಕಾಯ್ದೆಯ ನಿಯಮಗಳ ಪ್ರಕಾರ ಈ ಕಾರ್ಯಾಚರಣೆ ನಡೆಸಲಾಗಿದೆ.ಮಾದಕ ವಸ್ತುಗಳು ಸಾರ್ವಜನಿಕರ ಕೈಗೆ ತಲುಪದಂತೆ ತಡೆಯುವುದು ಹಾಗೂ ಡ್ರಗ್ಸ್ ಕಳ್ಳಸಾಗಣೆ ನಿಯಂತ್ರಿಸುವ ನಿರಂತರ ಪ್ರಯತ್ನದ ಭಾಗವಾಗಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಮಾದಕ ವಸ್ತುಗಳ ಕಳ್ಳಸಾಗಣೆ ಕುರಿತು ಮಾಹಿತಿ ಹೊಂದಿರುವ ನಾಗರಿಕರು 1933 ಸಹಾಯವಾಣಿಗೆ ಮಾಹಿತಿ ನೀಡಿ. ಮಾಹಿತಿ ನೀಡುವವರ ಗುರುತನ್ನು ಗೌಪ್ಯವಾಗಿಡಲಾಗುವುದು ಹಾಗೂ ಅರ್ಹ ಮಾಹಿತಿದಾರರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಎನ್ಸಿಬಿ ತಿಳಿಸಿದೆ.

