ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ನಿಮಾನ್ಸ್ (NIMHANS) ಆಸ್ಪತ್ರೆಯಲ್ಲಿ ತೃತೀಯ ಲಿಂಗಿಗಳೊಂದಿಗೆ ತಾರತಮ್ಯದಿಂದ ವರ್ತಿಸಲಾಗುತ್ತಿದೆ ಹಾಗೂ ಅವರ ಲಿಂಗ ಅಸ್ಮಿತೆಗೆ ಗೌರವ ನೀಡಲಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯನ್ನು ಖಂಡಿಸಿರುವ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (DYFI) ಕರ್ನಾಟಕ ರಾಜ್ಯ ಸಮಿತಿಯು, ರೋಗಿಯೊಂದಿಗೆ ಅನುಚಿತವಾಗಿ ವರ್ತಿಸಿದರೆನ್ನಲಾದ ವೈದ್ಯರ ವಿರುದ್ಧ ಸಮಗ್ರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ನಿಮಾನ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗುವ ಸಂದರ್ಭದಲ್ಲಿ ಭರ್ತಿ ಮಾಡಬೇಕಾದ ಅರ್ಜಿ ನಮೂನೆಯಲ್ಲಿ ಲಿಂಗದ ಆಯ್ಕೆಗೆ ‘ಗಂಡು’, ‘ಹೆಣ್ಣು’ ಮತ್ತು ‘ಇತರರು’ ಎಂಬ ಆಯ್ಕೆಗಳನ್ನು ಮಾತ್ರ ನೀಡಲಾಗಿದ್ದು, ತೃತೀಯ ಲಿಂಗಿಗಳ ಸ್ವಯಂ ಗುರುತಿಸಿಕೊಂಡ ಲಿಂಗ ಅಸ್ಮಿತೆಗೆ ಸೂಕ್ತ ಅವಕಾಶ ಕಲ್ಪಿಸಿಲ್ಲ ಎಂದು ಡಿವೈಎಫ್ಐ ಆರೋಪಿಸಿದೆ. 2014ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ NALSA ತೀರ್ಪು ತೃತೀಯ ಲಿಂಗಿಗಳ ಸ್ವಯಂ ಗುರುತಿಸಿಕೊಂಡ ಲಿಂಗ ಅಸ್ಮಿತೆಯನ್ನು ಗುರುತಿಸಿದೆ. 2019ರ ತೃತೀಯ ಲಿಂಗಿಗಳ ಹಕ್ಕುಗಳ ರಕ್ಷಣಾ ಕಾಯ್ದೆಯೂ ಆರೋಗ್ಯ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಾರತಮ್ಯವನ್ನು ನಿಷೇಧಿಸಿದೆ.

ಕೇರಳ ಮೂಲದ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ನಿಮಾನ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗುವ ಸಂದರ್ಭದಲ್ಲಿ ಅರ್ಜಿ ನಮೂನೆಯಲ್ಲಿ ತೃತೀಯ ಲಿಂಗದ ಆಯ್ಕೆ ಇಲ್ಲದಿರುವುದನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ವೈದ್ಯರೊಬ್ಬರು ರೋಗಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸಂತ್ರಸ್ತ ವ್ಯಕ್ತಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಮಾನವೀಯತೆ, ಗೌರವ ಮತ್ತು ಸೂಕ್ಷ್ಮತೆಯಿಂದ ವರ್ತಿಸುವುದು ವೈದ್ಯಕೀಯ ಸಂಸ್ಥೆಗಳ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ Mental Healthcare Act, 2017ರ ಕಾನೂನು ನಿಬಂಧನೆಗಳ ಪಾಲನೆ ಅತ್ಯಂತ ಮಹತ್ವದ್ದಾಗಿದೆ. ಈ ಕಾಯ್ದೆಯ ಸೆಕ್ಷನ್ 18 ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ಸೇವೆ ಪಡೆಯುವ ಹಕ್ಕನ್ನು ಖಾತರಿಪಡಿಸುತ್ತದೆ. ಲಿಂಗ ಅಥವಾ ಲೈಂಗಿಕ ಅಭಿರುಚಿ ಸೇರಿದಂತೆ ಯಾವುದೇ ಆಧಾರದ ಮೇಲೆ ತಾರತಮ್ಯ ಮಾಡದೆ ಮಾನಸಿಕ ಆರೋಗ್ಯ ಸೇವೆ ಒದಗಿಸಬೇಕೆಂಬ ಕಾನೂನು ಆಶಯವನ್ನು ಇದು ಒಳಗೊಂಡಿದೆ.


ಅದೇ ರೀತಿ ಕಾಯ್ದೆಯ ಸೆಕ್ಷನ್ 20 ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಹಕ್ಕು ಹಾಗೂ ಕ್ರೂರ, ಅಮಾನವೀಯ ಮತ್ತು ಅವಮಾನಕರ ವರ್ತನೆಯಿಂದ ರಕ್ಷಣೆ ಪಡೆಯುವ ಹಕ್ಕನ್ನು ಖಾತರಿಪಡಿಸುತ್ತದೆ. ಸೆಕ್ಷನ್ 21ರ ಪ್ರಕಾರ ಮಾನಸಿಕ ಆರೋಗ್ಯ ಸೇವೆ ಪಡೆಯುವ ವ್ಯಕ್ತಿಗಳನ್ನು ಸಮಾನವಾಗಿ ಪರಿಗಣಿಸಬೇಕು. ಲಿಂಗ, ಲೈಂಗಿಕತೆ, ಲೈಂಗಿಕ ಅಭಿರುಚಿ, ಧರ್ಮ, ಜಾತಿ, ಸಂಸ್ಕೃತಿ ಅಥವಾ ಅಂಗವೈಕಲ್ಯದ ಆಧಾರದ ಮೇಲೆ ಆರೋಗ್ಯ ಸೇವೆಯಲ್ಲಿ ತಾರತಮ್ಯ ಮಾಡುವಂತಿಲ್ಲ. ಹೀಗಾಗಿ ನಿಮಾನ್ಸ್ ಆಸ್ಪತ್ರೆಯಲ್ಲಿ ನಡೆದಿರುವುದಾಗಿ ಆರೋಪಿಸಲಾದ ಘಟನೆ ಈ ಕಾನೂನುಗಳ ಆಶಯ ಮತ್ತು ಹಕ್ಕುಗಳಿಗೆ ವಿರುದ್ಧವಾಗಿದೆಯೇ ಎಂಬುದನ್ನು ಸಮಗ್ರ ತನಿಖೆಯ ಮೂಲಕ ಪರಿಶೀಲಿಸಬೇಕು ಎಂದು ಡಿವೈಎಫ್ಐ ಆಗ್ರಹಿಸಿದೆ.
ಕರ್ನಾಟಕ ರಾಜ್ಯದ ಆರೋಗ್ಯ ಸಚಿವ ಯು.ಟಿ. ಖಾದರ್ ಹಾಗೂ ಸಂಬಂಧಪಟ್ಟ ಸಾಂಖ್ಯಿಕ ಇಲಾಖೆಯ ಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ತನಿಖೆಗೆ ಆದೇಶ ನೀಡಬೇಕು. ನಿಮಾನ್ಸ್ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ವಿವರಣೆ ಪಡೆದು, ರೋಗಿಯ ಹೇಳಿಕೆ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ, ಆಸ್ಪತ್ರೆಯ ದಾಖಲಾತಿ ನಮೂನೆಗಳು ಹಾಗೂ ವೈದ್ಯರ ವರ್ತನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. Mental Healthcare Act, 2017 ಸೇರಿದಂತೆ ಅನ್ವಯವಾಗುವ ಕಾನೂನುಗಳನ್ನು ಪಾಲಿಸದಿರುವುದು ತನಿಖೆಯಲ್ಲಿ ಸಾಬೀತಾದರೆ ಸಂಬಂಧಪಟ್ಟ ವೈದ್ಯರು ಮತ್ತು ಅಧಿಕಾರಿಗಳ ವಿರುದ್ಧ ಕಾನೂನುಬದ್ಧ ಹಾಗೂ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ತೃತೀಯ ಲಿಂಗಿಗಳೆಂಬ ಕಾರಣಕ್ಕೆ ಯಾವುದೇ ವ್ಯಕ್ತಿಯೂ ಆರೋಗ್ಯ ಸೇವೆ, ಸರ್ಕಾರಿ ಸೌಲಭ್ಯ ಅಥವಾ ಸಾರ್ವಜನಿಕ ಸಂಸ್ಥೆಗಳಲ್ಲಿ ಅವಮಾನ ಮತ್ತು ತಾರತಮ್ಯ ಎದುರಿಸಬಾರದು. ಕೇವಲ ಕಾನೂನು ರೂಪಿಸುವುದರಿಂದ ತಾರತಮ್ಯ ಕೊನೆಗೊಳ್ಳುವುದಿಲ್ಲ. ಅವುಗಳನ್ನು ಅನುಷ್ಠಾನಗೊಳಿಸುವಲ್ಲಿ ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಇಲಾಖೆ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ತಾರತಮ್ಯರಹಿತ, ಗೌರವಯುತ ಮತ್ತು ಮಾನವೀಯ ಆರೋಗ್ಯ ಸೇವೆ ಲಭ್ಯವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ಆಗ್ರಹಿಸಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ನಿಮಾನ್ಸ್ ಆಸ್ಪತ್ರೆಯ ವಿರುದ್ಧ ರಾಜ್ಯಾದ್ಯಂತ ತೀವ್ರ ಹೋರಾಟ ರೂಪಿಸಲಾಗುವುದು ಎಂದು ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಎಚ್ಚರಿಕೆ ನೀಡಿದೆ. ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷೆ ಲವಿತ್ರ ವಸ್ತ್ರದ ಮತ್ತು ಕಾರ್ಯದರ್ಶಿ ಸಂತೋಷ್ ಬಜಾಲ್ ಅವರು ಈ ಆಗ್ರಹವನ್ನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


