ಮಂಗಳೂರು, ನ.24 : ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದಾನಿ ಸಂಸ್ಥೆಯ ವಿರುದ್ಧ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಟ್ಯಾಕ್ಸಿ ಮ್ಯಾನ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ ವತಿಯಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಅಂತ್ಯಗೊಂಡಿದೆ.
ಕಳೆದ ಒಂದು ವಾರದಿಂದ ವಿಮಾನ ನಿಲ್ದಾಣದ ಆವರಣದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಟ್ಯಾಕ್ಸಿ ಮತ್ತು ಪ್ರವಾಸಿ ವಾಹನ ನಿರ್ವಾಹಕರು ನಡೆಸುತ್ತಿದ್ದ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿದ್ದು, ಪ್ರಯಾಣಿಕರು ಮತ್ತು ಪ್ರಯಾಣಿಕರಿಗೆ ನೆಮ್ಮದಿ ತಂದಿದ್ದು, ನವೆಂಬರ್ 24 ಮಂಗಳವಾರದಿಂದ ಸೇವೆಗಳು ಎಂದಿನಂತೆ ಪುನರಾರಂಭಗೊಳ್ಳಲಿವೆ.
ಅದಾನಿ ಸಂಸ್ಥೆಯ ವಿರುದ್ಧ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದ ಚಾಲಕ-ಮಾಲಕರು, ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ನವೆಂಬರ್ 25ರಿಂದ ವಿಮಾನ ನಿಲ್ದಾಣಕ್ಕೆ ಬಾಡಿಗೆಗಾಗಿ ವಾಹನಗಳನ್ನು ಕಳುಹಿಸದಿರಲು ನಿರ್ಧರಿಸಿದ್ದರು. ಈ ನಡುವೆ, ಪ್ರತಿಭಟನಾಕಾರರು ಅದಾನಿ ಸಂಸ್ಥೆಗೆ ಸೋಮವಾರದವರೆಗೆ ಗಡುವು ನೀಡಿದ್ದರು.ಅದರಂತೆ, ನವೆಂಬರ್ 23ರಂದು ಅದಾನಿ ಸಂಸ್ಥೆಯ ಪ್ರತಿನಿಧಿಗಳು ಪ್ರತಿಭಟನಾಕಾರರೊಂದಿಗೆ ಸಭೆ ನಡೆಸಿದ್ದು, ಸಭೆಯಲ್ಲಿ ಟ್ಯಾಕ್ಸಿ ಚಾಲಕ-ಮಾಲಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.ಅದಾನಿ ಸಂಸ್ಥೆಯ ಈ ಸ್ಪಂದನೆಯ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ತಮ್ಮ ಅನಿರ್ದಿಷ್ಟಾವಧಿ ಧರಣಿಯನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿದ್ದಾರೆ. ಒಟ್ಟಿನಲ್ಲಿ, ಕಳೆದ ಒಂದು ವಾರದಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿದ್ದ ಟ್ಯಾಕ್ಸಿ ಚಾಲಕ-ಮಾಲಕರ ಹೋರಾಟಕ್ಕೆ ಸದ್ಯಕ್ಕೆ ತೆರೆ ಬಿದ್ದಿದ್ದು, ಮುಂದಿನ ದಿನಗಳಲ್ಲಿ ಸಂಸ್ಥೆ ನೀಡಿರುವ ಸ್ಪಂದನೆ ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಬರಲಿದೆ ನೋಡಬೇಕಿದೆ.

