ತೊಕ್ಕೊಟ್ಟು: ಯಾವುದೇ ಕಾರ್ಯವನ್ನು ಶ್ರದ್ಧೆ, ನಿಷ್ಠೆ ಹಾಗೂ ಒಗ್ಗಟ್ಟಿನಿಂದ ಮಾಡಿದಾಗ ಅದರ ಪ್ರತಿಫಲ ಅದ್ಭುತವಾಗಿರುತ್ತದೆ ಎಂದು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಹೇಳಿದರು.

ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದ್ದ ಗೂಡುದೀಪ ಸಂಗಮ ಹಾಗೂ ದೀಪಾವಳಿ ಸಂಭ್ರಮ 2026 ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ‘ಆನಂದ ಮಿಲನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ವರ್ಷದ ಪ್ರತಿಷ್ಠಾನದ ಪ್ರತಿಯೊಂದು ಕಾರ್ಯಕ್ರಮವೂ ಯಶಸ್ವಿಯಾಗಿ ಜನಮೆಚ್ಚುಗೆ ಗಳಿಸಲು ಪ್ರತಿಯೊಬ್ಬ ಸದಸ್ಯರ ಶ್ರದ್ಧೆ, ಸಹಕಾರ ಹಾಗೂ ಉತ್ಸಾಹವೇ ಪ್ರಮುಖ ಕಾರಣವಾಗಿದೆ. ನಾನು ಅಧ್ಯಕ್ಷನಾಗಿರಬಹುದು, ಆದರೆ ಪ್ರತಿಯೊಬ್ಬ ಸದಸ್ಯರೂ ಬೆನ್ನೆಲುಬಾಗಿ ನಿಂತು ನಾಯಕತ್ವದ ಜವಾಬ್ದಾರಿಯನ್ನು ನಿರ್ವಹಿಸಿದ್ದರಿಂದ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯವಾಯಿತು. ಸದಸ್ಯರಿಗೆ ಎಷ್ಟು ಕೃತಜ್ಞತೆ ಹಾಗೂ ಧನ್ಯವಾದಗಳನ್ನು ಸಲ್ಲಿಸಿದರೂ ಕಡಿಮೆಯೇ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ಮುಂದಿನ ವರ್ಷ 20ನೇ ವರ್ಷಕ್ಕೆ ಕಾಲಿಡುತ್ತಿದ್ದು, ಈ ಸಂಭ್ರಮವನ್ನು 20 ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶವಿದೆ. ಇದಕ್ಕೆ ಎಲ್ಲ ಸದಸ್ಯರ ಸಹಕಾರ ಅಗತ್ಯವಿದ್ದು, ಪ್ರತಿಷ್ಠಾನದ ಬಗ್ಗೆ ಅಭಿಮಾನ ಹಾಗೂ ಆಸಕ್ತಿ ಹೊಂದಿರುವ ಇನ್ನಷ್ಟು ಸದಸ್ಯರು ಸಂಘಟನೆಯೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಯಾವುದೇ ಸಂಸ್ಥೆಯನ್ನು ಮುನ್ನಡೆಸಲು ಸಂದರ್ಭಕ್ಕೆ ತಕ್ಕಂತೆ ಸಾಮ, ದಾನ, ಭೇದ, ದಂಡ ಎಂಬ ತತ್ವಗಳನ್ನು ಅನುಸರಿಸುವ ಅಗತ್ಯವಿದೆ ಎಂದು ಸಾಂದರ್ಭಿಕವಾಗಿ ನುಡಿದರು.
ಈ ಸಂದರ್ಭದಲ್ಲಿ ಪ್ರತಿಷ್ಠಾನದ ಸದಸ್ಯರು ಮಾತನಾಡಿ, ಈ ವರ್ಷದ ಕಾರ್ಯಕ್ರಮಗಳ ಯಶಸ್ಸಿನ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಮುಂದಿನ ದಿನಗಳಲ್ಲಿಯೂ ಪ್ರತಿಷ್ಠಾನದ ಎಲ್ಲಾ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದರು.
ಕಳೆದ 19 ವರ್ಷಗಳಿಂದ ಪ್ರತಿಷ್ಠಾನದ ಪ್ರತಿಯೊಂದು ಕಾರ್ಯಕ್ರಮದ ಮುಂದಾಳತ್ವ ವಹಿಸಿ, ಉತ್ತಮ ನಾಯಕತ್ವದ ಮೂಲಕ ಸಂಘಟನೆಯ ಚಟುವಟಿಕೆಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಸ್ಥಾಪಕ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಅವರನ್ನು ಸದಸ್ಯರೆಲ್ಲರೂ ಶಾಲು ಹೊದಿಸಿ, ಹಾರ ಹಾಕಿ ಅಭಿಮಾನಪೂರ್ವಕವಾಗಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಸದಸ್ಯರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಸದಸ್ಯರು ಗಾಯನ ಹಾಗೂ ವಿವಿಧ ವಿನೋದಾವಳಿಗಳ ಮೂಲಕ ಸಂಭ್ರಮಿಸಿ ಆನಂದ ಮಿಲನ ಕಾರ್ಯಕ್ರಮವನ್ನು ಸಂತಸದಿಂದ ಆಚರಿಸಿದರು.
ಶ್ರೀ ಶಾಸ್ತರ ಬಳಗ ಮಡ್ಯಾರ್ ಇದರ ಪ್ರಧಾನ ಸಂಚಾಲಕ ಹಾಗೂ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಹಿತೈಷಿ ಪ್ರಸಾದ್ ಮಡ್ಯಾರ್ ಮತ್ತು ಯುವ ಉದ್ಯಮಿ ನಿಶಾನ್ ಬಿಲ್ಲವ ಕೆರೆಬೈಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ಕೃಷ್ಣ ಪೊನೆತೋಡು ಹಾಗೂ ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

