ಮಂಗಳೂರು: ಪೊಲೀಸ್ ಠಾಣೆಗೆ ಖುದ್ದಾಗಿ ತೆರಳದೆ ಎಲೆಕ್ಟ್ರಾನಿಕ್ ಮೂಲಕ ಅಪರಾಧದ ಮಾಹಿತಿ ಸಲ್ಲಿಸಿ E-FIR ದಾಖಲಿಸುವ ವ್ಯವಸ್ಥೆಯನ್ನು ರಾಜ್ಯಾದ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ‘ದಾರಿ’ ಮಂಗಳೂರು ಸಾಮಾಜಿಕ ಸಂಘಟನೆ ರಾಜ್ಯ ಸರ್ಕಾರ, ಗೃಹ ಇಲಾಖೆ ಹಾಗೂ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರಿಗೆ (DG & IGP) ಮನವಿ ಸಲ್ಲಿಸಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) 2023ರ ಸೆಕ್ಷನ್ 173(1)ರ ಪ್ರಕಾರ ಸಂಜ್ಞೇಯ ಅಪರಾಧಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮೌಖಿಕವಾಗಿ ಅಥವಾ ಎಲೆಕ್ಟ್ರಾನಿಕ್ ಸಂವಹನದ ಮೂಲಕ ಪೊಲೀಸ್ ಠಾಣಾಧಿಕಾರಿಗೆ ಸಲ್ಲಿಸಲು ಅವಕಾಶವಿದೆ. ಎಲೆಕ್ಟ್ರಾನಿಕ್ ಮೂಲಕ ಮಾಹಿತಿ ಸಲ್ಲಿಸಿದವರು ಮೂರು ದಿನಗಳೊಳಗೆ ಸಹಿ ಮಾಡಬೇಕೆಂಬ ನಿಯಮವೂ ಇದೆ. ಈ ಕಾನೂನು ಸೌಲಭ್ಯವು ಸೈಬರ್ ಅಪರಾಧಗಳಿಗೆ ಮಾತ್ರ ಸೀಮಿತವಾಗಿರದೆ ಕೊಲೆ, ಅತ್ಯಾಚಾರ, ಅಪಹರಣ, ಹಲ್ಲೆ, ಕಳ್ಳತನ, ದರೋಡೆ ಹಾಗೂ ವಂಚನೆ ಸೇರಿದಂತೆ ವಿವಿಧ ಸಂಜ್ಞೇಯ ಅಪರಾಧಗಳಿಗೂ ಅನ್ವಯಿಸುತ್ತದೆ ಎಂದು ಸಂಘಟನೆ ತಿಳಿಸಿದೆ.
ರಾಜ್ಯದ ಪ್ರತಿಯೊಂದು ಪೊಲೀಸ್ ಠಾಣೆಯ ಅಧಿಕೃತ ಇ-ಮೇಲ್ ವಿಳಾಸ, ಸುರಕ್ಷಿತ ಆನ್ಲೈನ್ ಪೋರ್ಟಲ್ ಹಾಗೂ ಮೊಬೈಲ್ ಆಧಾರಿತ ದೂರು ಸಲ್ಲಿಕೆ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ಒದಗಿಸಬೇಕು. ಎಲೆಕ್ಟ್ರಾನಿಕ್ ಮೂಲಕ ಸಲ್ಲಿಸಿದ ದೂರಿಗೆ ತಕ್ಷಣ ಸ್ವೀಕೃತಿ ಸಂಖ್ಯೆ ನೀಡುವುದರ ಜೊತೆಗೆ, ದೂರಿನ ಪ್ರಸ್ತುತ ಸ್ಥಿತಿಯನ್ನು ಆನ್ಲೈನ್ನಲ್ಲಿ ಪರಿಶೀಲಿಸುವ ವ್ಯವಸ್ಥೆಯನ್ನೂ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ವ್ಯವಸ್ಥೆಯಿಂದ ಮಹಿಳೆಯರು, ಹಿರಿಯ ನಾಗರಿಕರು, ಅಂಗವಿಕಲರು, ವಿದ್ಯಾರ್ಥಿಗಳು ಹಾಗೂ ಪೊಲೀಸ್ ಠಾಣೆಗೆ ತೆರಳಲು ಸಾಧ್ಯವಾಗದ ಸಂತ್ರಸ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ, ವಿದ್ಯಾರ್ಥಿಗಳು ಮತ್ತು ಯುವಜನರಲ್ಲಿ BNSS ಸೆಕ್ಷನ್ 173ರ ಕುರಿತು ಕಾನೂನು ಅರಿವು ಮೂಡಿಸಬೇಕು. ಕಾನೂನು ವಿದ್ಯಾರ್ಥಿಗಳು, ವಕೀಲರು ಹಾಗೂ ತಜ್ಞರು ಸಾರ್ವಜನಿಕರಿಗೆ ಸೂಕ್ತ ಮಾರ್ಗದರ್ಶನ ನೀಡುವಂತಾಗಬೇಕು ಎಂದು ಸಂಘಟನೆ ಆಶಿಸಿದೆ.
ರಾಜ್ಯದ ಶಾಸಕರು ಮತ್ತು ಸಂಸದರು ತಮ್ಮ ಕ್ಷೇತ್ರಗಳಲ್ಲಿ E-FIR ವ್ಯವಸ್ಥೆಯ ಅನುಷ್ಠಾನದ ಕುರಿತು ಸರ್ಕಾರ ಹಾಗೂ ಪೊಲೀಸ್ ಇಲಾಖೆಯನ್ನು ಪ್ರಶ್ನಿಸಬೇಕು. ವಿಧಾನಸಭೆ ಮತ್ತು ಸಂಸತ್ತಿನಲ್ಲಿಯೂ ಈ ವಿಚಾರ ಪ್ರಸ್ತಾಪಿಸಿ, ಡಿಜಿಟಲ್ ದೂರು ಸ್ವೀಕಾರ ವ್ಯವಸ್ಥೆ ಜಾರಿಗೆ ಒತ್ತಾಯಿಸಬೇಕು ಎಂದು ಮನವಿ ಮಾಡಲಾಗಿದೆ.
ಇದೇ ವೇಳೆ, ಎಲೆಕ್ಟ್ರಾನಿಕ್ ಮೂಲಕ ಅಪರಾಧದ ಮಾಹಿತಿ ಸಲ್ಲಿಸುವುದು ಮತ್ತು E-FIR ದಾಖಲಿಸುವುದರ ನಡುವಿನ ಕಾನೂನು ವ್ಯತ್ಯಾಸವನ್ನು ಸ್ಪಷ್ಟಪಡಿಸುವ ರಾಜ್ಯಮಟ್ಟದ ಮಾರ್ಗಸೂಚಿ ಹೊರಡಿಸಬೇಕು. BNSS ಸೆಕ್ಷನ್ 173ರಡಿ ಸಲ್ಲಿಕೆಯಾಗುವ ಪ್ರತಿಯೊಂದು ಆನ್ಲೈನ್ ದೂರೂ ಸ್ವಯಂಚಾಲಿತವಾಗಿ FIR ಆಗುವುದಿಲ್ಲ. ಸಂಜ್ಞೇಯ ಅಪರಾಧದ ಮಾಹಿತಿ ಮತ್ತು ಕಾನೂನು ಪ್ರಕ್ರಿಯೆಯ ಆಧಾರದಲ್ಲಿ FIR ದಾಖಲಿಸುವ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಸ್ಪಷ್ಟಪಡಿಸಿದೆ.
ಗಂಭೀರ ಅಪರಾಧಗಳ ಮಾಹಿತಿಯನ್ನು ಎಲೆಕ್ಟ್ರಾನಿಕ್ ಮೂಲಕ ಸ್ವೀಕರಿಸಿದಾಗ ವಿಳಂಬವಿಲ್ಲದೆ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟ ಜವಾಬ್ದಾರಿ ನಿಗದಿಪಡಿಸಬೇಕು. ಕಾನೂನಿನಲ್ಲಿ ನಾಗರಿಕರಿಗೆ ನೀಡಿರುವ ಹಕ್ಕುಗಳು ಕೇವಲ ದಾಖಲೆಗಳಿಗೆ ಸೀಮಿತವಾಗದೆ, ತಂತ್ರಜ್ಞಾನದ ಮೂಲಕ ಜನರಿಗೆ ಸುಲಭವಾಗಿ ನ್ಯಾಯ ದೊರೆಯುವಂತಾಗಬೇಕು. ಪೊಲೀಸ್ ಠಾಣೆಗೆ ತೆರಳಲು ಸಾಧ್ಯವಾಗದ ಕಾರಣಕ್ಕೆ ಯಾವುದೇ ಸಂತ್ರಸ್ತನ ದೂರು ನಿರ್ಲಕ್ಷ್ಯಕ್ಕೆ ಒಳಗಾಗಬಾರದು ಎಂದು ‘ದಾರಿ’ ಮಂಗಳೂರು ಸಾಮಾಜಿಕ ಸಂಘಟನೆ ಆಗ್ರಹಿಸಿದೆ.
ಜನಹಿತ, ಪಾರದರ್ಶಕ ಆಡಳಿತ ಹಾಗೂ ಡಿಜಿಟಲ್ ನ್ಯಾಯ ವ್ಯವಸ್ಥೆಗೆ ಒತ್ತು ನೀಡುತ್ತಿರುವ ‘ದಾರಿ’ ಮಂಗಳೂರು ಸಂಘಟನೆಯು ಈ ಸಂಬಂಧ ಕರ್ನಾಟಕ ಸರ್ಕಾರ, ರಾಜ್ಯ ಗೃಹ ಇಲಾಖೆ ಹಾಗೂ DG & IGP ಅವರಿಗೆ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಿ, ರಾಜ್ಯಾದ್ಯಂತ E-FIR ಮತ್ತು ಎಲೆಕ್ಟ್ರಾನಿಕ್ ದೂರು ಸ್ವೀಕಾರ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಒತ್ತಾಯಿಸಿದೆ.

