ತುಮಕೂರು, ಅ.08 : ಅಡುಗೆ ಎಣ್ಣೆ ಮರುಬಳಕೆ ವಿರುದ್ಧ ಶೀಘ್ರ ಕ್ರಮಕೈಗೊಳ್ಳುವುದಾಗಿ ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋಟೆಲ್ಗಳಲ್ಲಿ ಅಡುಗೆ ಎಣ್ಣೆ ಮರುಬಳಕೆ ದಂಧೆ ನಡೆಯುತ್ತಿದೆ. ಇದನ್ನು ನಿಷೇಧ ಮಾಡುವ ಯೋಚನೆ ಇದೆ. ಎಣ್ಣೆಯನ್ನು ಎಲ್ಲಿ ಖರೀದಿಸುತ್ತಾರೋ ಅಲ್ಲಿಯೇ ನೋಂದಣಿ ಮಾಡಬೇಕಾಗುತ್ತದೆ. ಇದಕ್ಕಾಗಿ ಒಂದು ಆ್ಯಪ್ನಲ್ಲಿ ನಮೂದು ಮಾಡುವಂತೆ ಚಿಂತನೆ ನಡೆಸಲಾಗಿದೆ. ಬಳಕೆ ಮಾಡಿದ ನಂತರ ಉಳಿದ ಎಣ್ಣೆ ಪ್ರಮಾಣ ಎಷ್ಟು ಎಂದು ಇದರಿಂದ ಗೊತ್ತಾಗಲಿದೆ ಎಂದರು.
ನಕಲಿ ವೈದ್ಯರನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಅವರ ವಿರುದ್ಧ ಖಂಡಿತ ಕ್ರಮ ಕೈಗೊಳ್ಳುತ್ತೇನೆ. ಅಧಿಕಾರಿಗಳು ಅಥವಾ ರಾಜಕಾರಣಿಗಳು ನಕಲಿ ವೈದ್ಯರ ಹಿಂದೆ ಇದ್ದರೂ ಕ್ರಮ ನಿಶ್ಚಿತ. ಇನ್ನು 15 ದಿನದಲ್ಲಿ ಎಲ್ಲವನ್ನೂ ಕ್ಲೀನ್ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಗುಡುಗಿದರು.

