ಮಂಗಳೂರು: ಇಂದಿನ ತೀವ್ರ ಸ್ಪರ್ಧಾತ್ಮಕ ಆರ್ಥಿಕ ಪರಿಸ್ಥಿತಿಯಲ್ಲಿಯೂ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘ ಠೇವಣಿ ಸಂಗ್ರಹದಲ್ಲಿ ಗಮನಾರ್ಹ ಪ್ರಗತಿಯನ್ನು ಹೊಂದಿದ್ದು, ರೂ. 94.33 ಕೋಟಿಯಿಂದ ರೂ.108.80 ಕೋಟಿಗೆ ಏರಿಕೆಯಾಗಿದೆ. ಇದೇ ರೀತಿ ಸಂಘದ ಸಾಲ ಮತ್ತು ಮುಂಗಡಗಳ ಮೊತ್ತವು ರೂ.೮೨.೯೦ ಕೋಟಿಯಿಂದ ರೂ.೯೧.೬೭ ಕೋಟಿಗೆ ಹೆಚ್ಚಳವಾಗಿದೆ. ಈ ಮೂಲಕ ವರದಿ ವರ್ಷದಲ್ಲಿ ಸಂಘವು ರೂ.೧.೦೭ ಕೋಟಿ ಲಾಭವನ್ನು ಗಳಿಸಲು ಸಂಘದ ಆರ್ಥಿಕ ಶಿಸ್ತು, ಸದಸ್ಯರ ಸಹಕಾರ, ಗ್ರಾಹಕರು ಸಂಘದ ಮೇಲಿಟ್ಟಿರುವ ಅಚಲ ವಿಶ್ವಾಸ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದ ಪ್ರಾಮಾಣಿಕ ಪರಿಶ್ರಮದಿಂದ ಸಾಧನೆ ಸಾಧ್ಯವಾಗಿದೆ ಎಂದು ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘದ ಅಧ್ಯಕ್ಷರಾದ ಎಸ್.ಜಗದೀಶ್ಚಂದ್ರ ಅಂಚನ್ ಹೇಳಿದರು.

ಅವರು ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘ ಇದರ ಕೊಡಿಯಾಲ್ ಬೈಲ್ ಶ್ರೀ ಭಗವತಿ ದೇವಸ್ಥಾನ ರಸ್ತೆಯಲ್ಲಿರುವ ʻಉನ್ನತಿʼ ಕೇಂದ್ರ ಕಚೇರಿಯಲ್ಲಿ ಜರಗಿದ 2025-26ನೇ ಸಾಲಿನ ಸರ್ವ ಸದಸ್ಯರ ೯೫ನೇ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವಿಶೇಷವಾಗಿ ʻಎʼ ತರಗತಿ ಸದಸ್ಯರಿಗೆ ಹೆಚ್ಚಿನ ಅನುಕೂಲಕವಾಗುವಂತಹ ಕಡಿಮೆ ಬಡ್ಡಿ ದರದಲ್ಲಿ ಸಾಲಗಳನ್ನು ನೀಡಲಾಗುತ್ತಿದೆ. ಸಂಘವು ಸುಸಜ್ಜಿತ ಸ್ವಂತ ಆಡಳಿತ ಕಚೇರಿಯೊಂದಿಗೆ ಹವಾನಿಯಂತ್ರಿತ ಹಾಗೂ ಸುಸಜ್ಜಿತ ಎರಡು ಸಭಾಭವನಗಳನ್ನು ಹೊಂದಿರುವುದು ಮತ್ತೊಂದು ಹೆಮ್ಮೆಯ ಸಂಗತಿ. ಸಂಘದ ಎ ತರಗತಿ ಸದಸ್ಯರಿಗೆ ಶುಭ ಸಮಾರಂಭಗಳಿಗೆ ಸಭಾಭವನವನ್ನು ರಿಯಾಯಿತಿ ದರದಲ್ಲಿ ಒದಗಿಸಲಾಗುತ್ತಿದೆ. ಸದಸ್ಯರು ಸದುಪಯೋಗ ಪಡೆದುಕೊಳ್ಳಬೇಕಾಗಿದೆ. ಪ್ರಸ್ತುತ ಸಂಘವು ನಾಲ್ಕು ಶಾಖೆಗಳನ್ನು ಹೊಂದಿದ್ದು ಸದಸ್ಯರಿಗೆ ಇನ್ನಷ್ಟು ಹತ್ತಿರವಾಗಿ ಹಾಗೂ ಪರಿಣಾಮಕಾರಿಯಾಗಿ ಸೇವೆ ಒದಗಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ತಾಲೂಕುವಾರು ಶಾಖೆಗಳನ್ನು ತೆರೆಯುವ ಯೋಜನೆಯನ್ನು ಹೊಂದಿದೆ. ಸದಸ್ಯರ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸತತ ಐದು ವರ್ಷಗಳಿಂದ ಮುಂದುವರಿಸಿಕೊಂಡು ಬರುತ್ತಿದೆ.

ʻಸಹಕಾರ ರತ್ನ ಡಾ.ಎಂ.ಎನ್. ಆರ್ ಇವರಿಗೆ ಕೃತಜ್ಞತೆಗಳುʼ
ಸಂಘಕ್ಕೆ ಸದಾ ಮಾರ್ಗದರ್ಶನ , ಸಹಕಾರ ಮತ್ತು ಬೆಂಬಲವನ್ನು ನೀಡುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಗೌರವಾನ್ವಿತ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ, ಬ್ಯಾಂಕಿನ ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಎಸ್ ಸಿಡಿಸಿಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷಣ ಭಟ್ .ಕೆ. ಇವರು ಸಂಘದ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಪ್ರಧಾನ ಮಾಡಿದರು. ಅಗಲಿದ ಸಂಘದ ಸದಸ್ಯರಿಗೆ ನಿಮಿಷ ಕಾಲ ಮೌನ ಪಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಇದೇ ಸಂದರ್ಭ ಬಸವಶ್ರೀ ಪುರಸ್ಕಾರವನ್ನು ಪಡೆದ ಸಂಘದ ಅಧ್ಯಕ್ಷರು ಎಸ್. ಜಗದೀಶ್ಚಂದ್ರ ಅಂಚನ್ ಇವರನ್ನು ಸಮಾರಂಭದಲ್ಲಿ ಅಭಿನಂದಿಸಲಾಯಿತು.
ಈ ಸಂದರ್ಭ ನಿರ್ದೇಶಕರುಗಳಾದ ದಿವಾಕರ ಶೆಟ್ಟಿ ಕೆ., ವಿಶವೇಶ್ವರ ಐತಾಳ್, ಜಯಪ್ರಕಾಶ್ ರೈ, ಗಿರಿಧರ್ ಕೆ., ಕೆ.ಟಿ.ವಿಶ್ವನಾಥ್, ಶಿವಾನಂದ್ ಪಿ., ಚಂದ್ರಕಲಾ ಕೆ., ಮೋಹನ್ ಎನ್., ವಿಶ್ವನಾಥ್ ಅಮೀನ್, ಗೀತಾಕ್ಷಿ, ಕಿರಣ್ ಕುಮಾರ್ ಶೆಟ್ಟಿ, ನಿಶಿತಾ ಜಯರಾಮ್, ಪ್ರೇಮರಾಜ್ ಭಂಡಾರಿ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಪೂಜಾರಿ ಸ್ವಾಗತಿಸಿ ನಿರೂಪಿಸಿದರು. ಉಪಾಧ್ಯಕ್ಷರಾದ ರಾಘವ ಆರ್ ಉಚ್ಚಿಲ್ ವಂದಿಸಿದರು.
`ತೊಕ್ಕೊಟ್ಟು, ಮೂಡಬಿದ್ರೆ, ಬಿ.ಸಿ.ರೋಡ್, ಸುರತ್ಕಲ್‌ನಲ್ಲಿ ನಾಲ್ಕು ಹೊಸ ಶಾಖೆಗಳು ಶೀಘ್ರ ಆರಂಭ’
ಸಹಕಾರಿ ಸಂಘದ ವಿಸ್ತರಣೆಯ ಭಾಗವಾಗಿ ತೊಕ್ಕೊಟ್ಟು, ಮೂಡಬಿದ್ರೆ, ಬಿ.ಸಿ.ರೋಡ್ ಹಾಗೂ ಸುರತ್ಕಲ್‌ನಲ್ಲಿ ನಾಲ್ಕು ಹೆಚ್ಚುವರಿ ಶಾಖೆಗಳನ್ನು ಶೀಘ್ರದಲ್ಲೇ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಸಂಘದ ಸೇವೆಯನ್ನು ಇನ್ನಷ್ಟು ವಿಸ್ತರಿಸಿ ಗ್ರಾಹಕರು ಹಾಗೂ ಸದಸ್ಯರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.
ಸಂಘಕ್ಕೆ ಸತತ 8ನೇ ಬಾರಿಯೂ ಸಾಧನಾ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಸಂಘದ ಕಾರ್ಯನಿರ್ವಹಣೆ ಹಾಗೂ ಸಾಧನೆಗೆ ಇದು ದೊರೆತಿರುವ ಮಹತ್ವದ ಗೌರವವಾಗಿದೆ.
ಇದೇ ವೇಳೆ, ಸಂಘದ ಕೇಂದ್ರ ಕಚೇರಿಗೆ ಅಗತ್ಯವಿರುವ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

