ಮಡಿಕೇರಿ, ಮೇ 18: ಸಾಕಾನೆಗಳ ಕಾದಾಟದ ವೇಳೆ ಅವುಗಳ ನಡುವೆ ಸಿಲುಕಿ ಮಹಿಳೆಯೋರ್ವರು ದಾರುಣವಾಗಿ ಮೃತಪಟ್ಟಿರುವ ಘಟನೆ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ದುಬಾರೆ ಶಿಬಿರದಲ್ಲಿ ನಡೆದಿದೆ.

ಒಂದು ಆನೆ ದಂತದಿಂದ ತಿವಿದ ಪರಿಣಾಮ ಮತ್ತೊಂದು ಆನೆ ನೆಲಕ್ಕುರಿಳಿದೆ. ಈ ವೇಳೆ ಅಲ್ಲೇ ಇದ್ದ ಮಹಿಳೆ ಆನೆಯಡಿ ಸಿಲುಕಿದ್ದಾರೆ. ಗಂಭೀರ ಗಾಯಗೊಂಡಿದ್ದ ಆಕೆಯನ್ನು ಕುಶಾಲನಗರ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಮೃತರನ್ನು ಚೆನ್ನೈ ಮೂಲದ ಜಿನ್ಶು(33) ಎಂದು ಗುರುತಿಸಲಾಗಿದೆ.
ಚೆನ್ನೈ ಮೂಲದ ಜಿನ್ಶು ಎಂಬ ಮಹಿಳೆ ಕುಟುಂಬ ಸಮೇತ ನಂಜರಾಯಪಟ್ಟಣದ ದುಬಾರೆ ಆನೆ ಶಿಬಿರಕ್ಕೆ ಪ್ರವಾಸಕ್ಕೆ ಬಂದಿದ್ದರು. ಅವರು ಕಾವೇರಿ ನೀರಲ್ಲಿ ಆಟವಾಡುತ್ತಿರುವ ಸಂದರ್ಭ ಮಾವುತರು ಆನೆಗಳನ್ನು ಸ್ನಾನಕ್ಕೆಂದು ಕರೆತಂದಿದ್ದರು. ಈ ವೇಳೆ ಆನೆಗಳ ನಡುವೆ ಕಾದಾಟ ಶುರುವಾಗಿದೆ. ದುರ್ದೈವ ಎಂಬಂತೆ ಅಲ್ಲೇ ಇದ್ದ ಪ್ರವಾಸಿ ಮಹಿಳೆಯ ಮೇಲೆ ಆನೆ ಬಿದ್ದಿದ್ದು, ನೆಲಕ್ಕೆ ಅಪ್ಪಳಿಸಿದ ಜಿನ್ಶು ಅವರ ತಲೆಗೆ ಗಂಭೀರ ಗಾಯವಾದ ಪರಿಣಾಮ ಅವರು ಮೃತಪಟ್ಟಿದ್ದಾರೆ.
ಆನೆಗಳ ಕಾದಾಟದ ವೇಳೆ ಅವುಗಳ ಕಾಲಿನ ಸಮೀಪ ಸಿಲುಕಿಕೊಂಡಿದ್ದ ಮಹಿಳೆ ಜಿನ್ಶು ರಕ್ಷಣೆಗೆ ಶಕ್ತಿಮೀರಿ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಆನೆಗಳ ನಿಯಂತ್ರಣಕ್ಕೆ ಮಾವುತರು ಸತತ ಪ್ರಯತ್ನ ನಡೆಸಿರುವ ಹೊರತಾಗಿ, ಮಹಿಳೆಯ ರಕ್ಷಣೆಗೆ ಮಗುವನ್ನು ಕೈನಲ್ಲಿ ಹಿಡಿದ್ದ ವ್ಯಕ್ತಿ ಸೇರಿ ಕೆಲವರು ಯತ್ನಿಸಿದರಾದರೂ ಅದು ಫಲಪ್ರದವಾಗಿಲ್ಲ. ಅಲ್ಲೇ ಇದ್ದ ಇನ್ನು ಕೆಲ ಪ್ರವಾಸಿಗರು ಆನೆಗಳ ಕಾದಾಟಕ್ಕೆ ಬೆದರಿ ಕಾಲ್ಕಿತ್ತು ಓಡಿದ್ದು, ಅದೃಷ್ಟವಶಾತ್ ಎಂಬಂತೆ ಅವರೆಲ್ಲ ಬಚಾವ್ ಆಗಿದ್ದಾರೆ. ಆದರೆ ಪ್ರವಾಸಕ್ಕೆಂದು ಬಂದಿದ್ದ ಅಮಾಯಕ ಮಹಿಳೆಯ ಜೀವವನ್ನು ಸಾಕಾನೆಗಳು ಬಲಿ ಪಡೆದಿವೆ. ಘಟನೆ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

