ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತಲಪಾಡಿ: ಗಾಂಧಿ ಜಯಂತಿ ರಜೆ ನಿಮಿತ್ತ ಈಜಲು ಹೋದ ಬಾಲಕನೋರ್ವ ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉಚ್ಚಿಲ ತಲಪಾಡಿ ಬಳಿಯ ಅಳಿವೆಬಾಗಿಲಿನಲ್ಲಿ ಶುಕ್ರವಾರ ಸಂಜೆ ವೇಳೆ ಸಂಭವಿಸಿದ್ದು, ಮುಳುಗುತ್ತಿದ್ದ ಮತ್ತಿಬ್ಬರು ಬಾಲಕರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಮೃತ ಬಾಲಕನನ್ನು ತಲಪಾಡಿ ಕೆ.ಸಿ.ನಗರ ಪಿಲಿಕೂರು ನಿವಾಸಿ ಅಬ್ಬಾಸ್ ಎಂಬವರ ಪುತ್ರ ಅರ್ಫಾಝ್ (16) ಎಂದು ಗುರುತಿಸಲಾಗಿದ್ದು, ತಲಪಾಡಿ ಕೆ.ಸಿ.ರೋಡ್ ನ ಫಲಾಹ್ ಶಿಕ್ಷಣ ಸಂಸ್ಥೆಯಲ್ಲಿ 9ನೇ ತರಗತಿ ವಿದ್ಯಾರ್ಥಿ. ಶಾಲೆಗಳಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಕೆ.ಸಿ.ನಗರದ ಸುಮಾರು 10-15 ರಷ್ಟು ಮಕ್ಕಳ ತಂಡ ತಲಪಾಡಿಯ ಅಳಿವೆಬಾಗಿಲು ಸಮೀಪ ಈಜಲು ತೆರಳಿದ್ದರು. ಮಧ್ಯಾಹ್ನ ವೇಳೆ ಈಜಾಟ ಆಡಲು ಆರಂಭಿಸಿದ್ದ ಮಕ್ಕಳ ಪೈಕಿ ಮೂವರು ಸಂಜೆ ವೇಳೆ ಕೆಸರಿನಲ್ಲಿ ಹೂತು ಮುಳುಗಿದ್ದರು. ಇದನ್ನು ಕಂಡು ಉಳಿದ ಮಕ್ಕಳು ರಕ್ಷಣೆಗಾಗಿ ಬೊಬ್ಬೆ ಹಾಕಿದ್ದು, ಕೂಡಲೇ ಸ್ಥಳೀಯರು ಸ್ಥಳಕ್ಕಾಗಮಿಸಿ ಇಬ್ಬರನ್ನು ರಕ್ಷಿಸಿದರೆ ಅರ್ಫಾಝ್ ಮಾತ್ರ ನೀರುಪಾಲಾಗಿದ್ದ.
ತಲಪಾಡಿ ಕಡೆಯಿಂದ ಹರಿದುಬರುವ ಹೊಳೆ ಸಮುದ್ರಕ್ಕೆ ಸೇರುವಲ್ಲಿ ಮಣ್ಣು ತುಂಬಿದ್ದರಿಂದ , ಕೆಸರಿನ ಅರಿವು ಇಲ್ಲದ ಹಿನ್ನೆಲೆಯಲ್ಲಿ ಘಟನೆ ಸಂಭವಿಸಿದೆ ಎನ್ನಲಾಗಿದೆ. ಉಚ್ಚಿಲ ಬೆಟ್ಟಂಪಾಡಿಯಿಂದ ಅಳಿವೆಬಾಗಿಲಿನವರೆಗೆ ಮಕ್ಕಳು ನಡೆದೇ ಸಾಗಿ ಸ್ನಾನಕ್ಕೆ ಇಳಿದಿದ್ದರು. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಉಳ್ಳಾಲ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.


