ಕಾಸರಗೋಡು, ಮಾ.24: ಶಿರೂರು ಭೂಕುಸಿತದಲ್ಲಿ ನಾಪತ್ತೆಯಾದ ಅರ್ಜುನ್ ಅವರ ತಾಯಿ ಶೀಲಾ ಅವರು ಮಂಜೇಶ್ವರ ಮಂಡಲದ ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ಅವರಿಗೆ ನಾಮಪತ್ರ ಸಲ್ಲಿಕೆಯೊಂದಿಗೆ ಪಾವತಿಸಬೇಕಾದ ಇಡುಗಂಟನ್ನು ನೀಡಿ ಆಶೀರ್ವದಿಸಿದ್ದಾರೆ.

ನಾಮಪತ್ರ ಸಮರ್ಪಣೆಗಿಂತ ಪೂರ್ವಭಾವಿಯಾಗಿ ಎಕೆಎಂ ಅಶ್ರಫ್ ಪಾಣಕ್ಕಾಡ್ ತಂಙಳ್ ಆಶೀರ್ವಾದಕ್ಕೆ ತೆರಳಿದ್ದರು. ಮರಳಿ ಬರುವ ದಾರಿ ಮಧ್ಯೆ ಕೋಝಿಕೋಡ್ ಕನ್ನಾಡಿಕ್ಕಲ್ನಲ್ಲಿ ವಾಸಿಸುವ ಅರ್ಜುನ್ ತಾಯಿಯನ್ನೂ ಭೇಟಿಯಾಗಿದ್ದರು. ಈ ವೇಳೆ ಅರ್ಜುನ್ ಅಮ್ಮ ಅಶ್ರಫ್ ಅವರಿಗೆ ಇಡುಗಂಟು ನೀಡಿದರು. ಉತ್ತರ ಕರ್ನಾಟಕದ ಶಿರೂರಿನಲ್ಲಿ ಭೂಕುಸಿತ ನಡೆದು ಲಾರಿ ಸಹಿತ ಹೊಳೆಯಲ್ಲಿ ನೀರುಪಾಲಾದ ಅರ್ಜುನ್ ಪತ್ತೆಗೆ ಒಂದೂವರೆ ತಿಂಗಳ ಕಾರ್ಯಾಚರಣೆ ನಡೆದಿತ್ತು.
ಕೇರಳ ಕರ್ನಾಟಕದ ಮಧ್ಯವರ್ತಿಯಂತೆ ಶಾಸಕ ಎಕೆಎಂ ಅಶ್ರಫ್ ಶಿರೂರಿನಲ್ಲಿದ್ದರು. ಆ ಸಂದರ್ಭವನ್ನು ಕೇರಳದ ದೃಶ್ಯ ಮಾಧ್ಯಮಗಳು ಬಿತ್ತರಿಸಿದ್ದವು. ಸತತ ನಲುವತ್ತಕ್ಕೂ ಅಧಿಕ ದಿನದ ಹುಡುಕಾಟದಿಂದ ಶಿರೂರು ಹೊಳೆಯಲ್ಲಿ ಅರ್ಜುನನ ಅಸ್ಥಿ ಅವಶೇಷಗಳು ಸಿಕ್ಕಿದ್ದುವು. ಅದನ್ನು ಕೇರಳದುದ್ದಕ್ಕೂ ಅರ್ಜುನ್ ಅಂತ್ಯಾಜಲಿ ಪಯಣದ ಮೂಲಕ ಕೊಂಡೊಯ್ದು ಅರ್ಜುನ್ ಅಮ್ಮನಿಗೆ ಒಪ್ಪಿಸಲಾಗಿತ್ತು. ಈ ಘಟನೆ ಬಳಿಕ ಅರ್ಜುನ್ ಕುಟುಂಬದ ಜತೆ ಅಶ್ರಫ್ ಆತ್ಮೀಯರಾಗಿದ್ದಾರೆ.

