ಕೊಣಾಜೆ: ದೈನಂದಿನ ಬದುಕಿನಲ್ಲಿ ಹಾಸ್ಯದ ಅನೇಕ ಸನ್ನಿವೇಶಗಳು ನಡೆಯುತ್ತಾ ಇರುತ್ತವೆ. ಅದನ್ನು ಕಲೆಯಾಗಿ ಪರಿವರ್ತಿಸುವ ಪ್ರತಿ ಭೆ ಕಲಾವಿದರಲ್ಲಿರಬೇಕು. ಸಾಮಾನ್ಯ ರೇಖೆಗಳಲ್ಲಿ ಅರಳುವ ವ್ಯಂಗ್ಯ ಚಿತ್ರಗಳಿಗೆ ಸಮಾಜ ಅಂಕುಡೊಂಕುಗಳನ್ನು ತಿದ್ದುವ ಸಾಮರ್ಥ್ಯವಿದೆ ಎಂದು ವ್ಯಂಗ್ಯಚಿತ್ರ ಕಲಾವಿದ ವೆಂಕಟ್ ಭಟ್ ಎಡನೀರು ಅವರು ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ಎನ್. ಜಿ. ಪಾವಂಜೆ ಲಲಿತಾ ಕಲಾ ಪೀಠ ಹಾಗೂ ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್, ಮಂಗಳೂರು ಇದರ ವತಿಯಿಂದ ಸೋಮವಾರ ನಡೆದ “ವ್ಯಂಗ್ಯಚಿತ್ರ ರಚನೆ ಮತ್ತು ಆಸ್ವಾದನೆ” ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.
ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಡಾ. ಸೇಸಪ್ಪ ಅಮೀನ್ ಅವರು ಮಾತನಾಡಿ, ಎನ್ ಎಸ್ ಎಸ್ ನಂತಹ ಶಿಬಿರಗಳು ಶೈಕ್ಷಣಿಕ ವಾತಾವರಣದ ನಡುವೆ ಭವಿಷ್ಯದ ಜೀವನಾನುಭವನ್ನು ಒದಗಿಸಿಕೊಡುತ್ತದೆ. ಅಲ್ಲದೆ ನಮ್ಮಲ್ಲಿರುವ ಪ್ರತಿಭೆಯ ಅನಾವರಣಕ್ಕೆ, ವ್ಯಕ್ತಿತ್ವವನ್ನು ರೂಪಿಸಲು ಇಂತಹ ಶಿಬಿರಗಳು ಪ್ರಯೋಜನಕಾರಿಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಎನ್. ಜಿ .ಪಾವಂಜೆ ಲಲಿತಕಲಾ ಪೀಠದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಅವರು, ಲಲಿತಕಲೆಗಳು ಒತ್ತಡಗಳಿಂದ ನಮ್ಮ ಬದುಕನ್ನು ಹಗುರುವಾಗಿಸುತ್ತದೆ. ಸಮಾಜದ ಅಂಕುಡೊಂಕುಗಳನ್ನು ಜನರೆದುರಿಗೆ ತೆರದಿಡುವುದರಲ್ಲಿ ವ್ಯಂಗ್ಯ ಚಿತ್ರಗಳು ಪರಿಣಾಮಕಾರಿಯಾಗಿದೆ. ವಿದ್ಯಾರ್ಥಿಗಳು ಇದರ ಮಹತ್ವವನ್ನು ಅರಿತುಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ನ ಅಧ್ಯಕ್ಷರಾದ ಡಾ.ರಾಘವೇಂದ್ರ ಹೊಳ್ಳ, ಉಪಪ್ರಾಂಶುಪಾಲರಾದ ವಿದ್ಯಾಲಕ್ಷ್ಮೀ ಪಿ.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಗಳಾದ ದೀಕ್ಷಿತಾ ಸ್ವಾಗತಿಸಿದರು. ಪ್ರತೀಕ್ಷಾ ವಂದಿಸಿದರು. ಅನ್ವಿತಾ ಕಾರ್ಯಕ್ರಮ ನಿರೂಪಿಸಿದರು.



