ಮಂಗಳೂರು: ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಪ್ರತಿವರ್ಷ ನೀಡುವ ವೀರಾರಾಣಿ ಅಬ್ಬಕ್ಕ ಪ್ರಶಸ್ತಿ-2025-26ನೇ ಸಾಲಿನ ಪ್ರಶಸ್ತಿಗೆ ಸಾಹಿತ್ಯದಲ್ಲಿ ಡಾ.ಸಾಯಿಗೀತಾ ಹಾಗೂ ಕಲೆಯಲ್ಲಿ ವಿದುಷಿ ರಾಜಶ್ರೀ ಉಳ್ಳಾಲ್ ಆಯ್ಕೆಯಾಗಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಮಿತಿಯ ಪ್ರಮುಖರಾದ ಜಯರಾಮ ಶೆಟ್ಟಿ, ಪ್ರಶಸ್ತಿಯು ತಲಾ 25 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಹೊಂದಿರುತ್ತದೆ. ಫೆ.14ರಂದು ತೊಕ್ಕೊಟ್ಟಿನಲ್ಲಿ ನಡೆಯುವ ಅಬ್ಬಕ್ಕ ಉತ್ಸವದಲ್ಲಿ ಪ್ರಧಾನ ಮಾಡಲಾಗುತ್ತದೆ. ಹಲವು ಮಂದಿ ಗಣ್ಯರು ಈ ಉತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದರು.
ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಮಾನವಿಕ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಹಾಗೂ ಇದೇ ಸಂಸ್ಥೆಯಲ್ಲಿ ಡಾ.ಕೆ.ಆರ್.ಶೆಟ್ಟಿ ತುಳು ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಿರುವ ಡಾ.ಸಾಯಿಗೀತಾ ಅವರು ಸಂಶೋಧನೆ,
ಪದಕೋಶ, ಕವನಸಂಕಲನ, ಜೀವನಚರಿತ್ರೆ, ಭಾಷೆ ಕಲಿಯುವಿಕೆಯ ಪಠ್ಯ, ಅನುವಾದ ಹಾಗೂ ಸಂಪಾದಿತ ಪುಸ್ತಕಗಳು ಸೇರಿ 70ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ ಎಂದರು.
ರಾಜಶ್ರೀ ಉಳ್ಳಾಲ್ ಅವರು ರಾಜ್ಯ ಸರ್ಕಾರ ನಡೆಸುವ ಭರತನ್ಯಾ ಪ್ರಾಥಮಿಕ, ಮಾಧ್ಯಮಿಕ, ವಿದ್ವತ್ ಪರೀಕ್ಷೆಗಳಿಗೆ ಪರೀಕ್ಷಕರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ವಿವಿಯಲ್ಲಿ ಲಲಿತಕಲಾ ವಿಭಾಗದ ಅಧ್ಯಯ ಮಂಡಳಿಯ ಸದಸ್ಯರಾಗಿ, ನೃತ್ಯಕಲಾ ಪಠ್ಯವಸ್ತು ತಯಾರಿಕೆಯ ಸದಸ್ಯರಾಗಿ ನಿಯೋಜನೆಗೊಂಡಿದ್ದಾರೆ. ಅವರು ತಮ್ಮ ನೃತ್ಯ ಪ್ರತಿಭೆ ಮತ್ತು ಸೇವೆಗಾಗಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಎಂದವರು ವಿವರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ದಿನಕರ ಉಳ್ಳಾಲ್, ಪ್ರಮುಖರಾದ ಧನಲಕ್ಷ್ಮಿ ಗಟ್ಟಿ, ಸದಾನಂದ ಬಂಗೇರ, ಆನಂದ ಅಸೈಗೋಳಿ, ರತ್ನಾವತಿ ಬೈಕಾಡಿ ಹಾಗೂ ಆಲಿಯಬ್ಬ ಉಪಸ್ಥಿತರಿದ್ದರು.



