ಕೊಣಾಜೆ: ಸಂಘ ಸಂಸ್ಥೆಗಳು ಸಮಾಜಮುಖಿಯಾಗಿ ತೊಡಗಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಕುಲಾಲ ಸಮಾಜವು ಮಾನವೀಯ ಮೌಲ್ಯ, ನಿಷ್ಠೆಯನ್ನು ಪ್ರತಿಬಿಂಭಿಸುವ ಸಮುದಾಯವಾಗಿದೆ. ಕಿರಿಯರು ಹಿರಿಯ ವ್ಯಕ್ತಿಗಳ ಆದರ್ಶ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಮುನ್ಮಡೆಯಬೇಕು ನರಿಂಗಾನ ಕಂಬಳ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರಶಾಂತ್ ಕಾಜವ ಅವರು ಹೇಳಿದರು.

ಅವರು ಕುಲಾಲ ಸಂಘ ಮುಡಿಪು ವಲಯ ಇದರ 2025-26 ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಜೀವನದಲ್ಲಿ ಏರು ಪೇರು ಸಹಜ. ಸವಾಲುಗಳನ್ನು ಎದುರಿಸಿ ಮುನ್ನಡೆದರೆ ಯಶಸ್ಸು. ಮಕ್ಕಳಿಗೆ ಸಂಸ್ಕಾರ ಮತ್ತು ವಿದ್ಯೆ ಕೊಡುವ ಮೂಲಕ ಸಮಾಜದಲ್ಲಿ ಮುಖ್ಯವಾಹಿನಿಗೆ ಬರುವ ಹಾಗೆ ನೋಡಿಕೊಳ್ಳುವುದು ನಮ್ಮ ಜವಬ್ಧಾರಿ ಎಂದರು.
ಹಿರಿಯರಾದ ದರ್ಣಪ್ಪ ಮೂಲ್ಯ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಇದರ ಮಾಜಿ ಅಧ್ಯಕ್ಣರಾದ ಸಂತೋಷ್ ಕುಮಾರ್ ಬೋಳಿಯಾರ್ ಅವರು ಮಾತನಾಡಿ ಕುಲಾಲ ಸಮಾಜದ ಮಾಣಿಕ್ಯ ಅಮ್ಮೆಂಬಳ ಬಾಳಪ್ಪ ಅವರು ಸ್ವಾತಂತ್ರ್ಯ ಹೋರಾಟದ ಮೂಲಕ , ಸಮಾಜಕ್ಕೆ ಸದಾ ಮಾರ್ಗದರ್ಶನ ನೀಡಿದ ಮಹಾನ್ ಸಾಧಕರಾಗಿದ್ದಾರೆ ಎಂದರು.
ಮುಡಿಪು ಕುಲಾಲ ಸಂಘದ ಅಧ್ಯಕ್ಣರಾದ ಪುಂಡರಿಕಾಕ್ಷ ಮೂಲ್ಯ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ನಾವು ರಾಜಕೀಯ ಮಾತ್ರವಲ್ಲ ಶಿಕ್ಷಣದ ಸಾಧನೆಯ ಮೂಲಕವೂ ಸಮಾಜದಲ್ಲಿ ಗುರುತಿಸಲು ಸಾಧ್ಯ. ಕುಲಾಲ ಸಮುದಾಯದ ವಿದ್ಯಾರ್ಥಿಗಳು, ಯುವ ಸಮುದಾಯ ಶಿಕ್ಷಣ, ಕೌಶಲಗಳ ಮೂಲಕ ಸಮುದಾಯದಲ್ಲಿ ಗುರುತಿಸುವಂತಾಗಬೇಕು ಎಂದರು.
ಜಿಲ್ಲಾ ಮೂಲ್ಯರ ಯಾನೆ ಕುಲಾಲ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್, ನಮ್ಮೆಲ್ಲರನ್ನು ಚಿಂತನೆಗೊಳಪಡಿಸುವ ಅನೇಕ ಮೌಲಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿರುವ ಮುಡಿಪು ಕುಲಾಲ ಸಂಘ ಮಾದರಿಯಾಗಿದೆ. ಹಿರಿಯರು ಪಾಲಿಸಿಕೊಂಡು ಬಂದಿರುವ ಮೌಲ್ಯಗಳನ್ನು ಪಾಲಸಿಕೊಂಡು ಮುನ್ನಡೆಯೋಣ ಎಂದರು.
ಸಿದ್ದಕಟ್ಟೆ ಕುಲಾಲ ಸಂಘದ ನಿಕಟಪೂರ್ವ ಅಧ್ಯಕ್ಣರಾದ ರಾಮಯ್ಯ ಸಿದ್ದಕಟ್ಟೆ, ಕುರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರೇಮ ಗಟ್ಟಿ , ವೀರನಾರಾಯಣ ದೇವಸ್ಥಾನದ ಟ್ರಸ್ಟಿ ಪ್ರೇಮಾನಂದ ಕುಲಾಲ್, ವಗ್ಗ ಕುಲಾಲ ಸಂಘದ ಅಧ್ಯಕ್ಷರಾದ ಪುರುಷೋತ್ತಮ ಕುಲಾಲ್ ವಗ್ಗ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯುವ ಉದ್ಯಮಿಗಳಾದ ಶಂಕರ್ ಕುಲಾಲ್ , ಜಗದೀಶ್ ಬಚ್ಚಾರ್, ಸುಜಿತ್ ಮರೋಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶೈಕ್ಷಣಿಕ ಮತ್ತು ಜೀವನ ಮಾರ್ಗದರ್ಶನ ಎಂಬ ವಿಷಯದಲ್ಲಿ ಪ್ರಾಧ್ಯಾಪಕರಾದ ಡಾ.ಅರವಿಂದ ಚೊಕ್ಕಾಡಿ ಅವರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಸದಾನಂದ ಬಂಗೇರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಮೋಹನ್ ದಾಸ್ ಅವರು ಸ್ವಾಗತಿಸಿದರು. ಪ್ರಮೀಳ ಯೋಗೀಶ್ ವಂದಿಸಿದರು. ಪ್ರವೀಣ್ ಬಸ್ತಿ ಹಾಗೂ ಪ್ರಜ್ಞಾ ಮೂಳೂರು ಕಾರ್ಯಕ್ರಮ ನಿರೂಪಿಸಿದರು.




