ಉಳ್ಳಾಲ: ದೇರಳಕಟ್ಟೆ ಭಾಗದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಮಾದಕ ವಸ್ತು ದುರುಪಯೋಗ ತಡೆಗಟ್ಟುವ ಉದ್ದೇಶದಿಂದ ಉಳ್ಳಾಲ ಮತ್ತು ಕೊಣಾಜೆ ಪೊಲೀಸರು ಕೇರಳ ತೆರಳುವ ಕಾಲೇಜು ಬಸ್ಸುಗಳನ್ನು ತಡೆದು ಬೀರಿ ಕೋಟೆಕಾರು ಮತ್ತು ಅಸೈಗೋಳಿಯಲ್ಲಿ ಜಂಟಿಯಾಗಿ ದಿಢೀರ್ ಮಾದಕ ವಸ್ತು ಪರೀಕ್ಷಾ ಕಾರ್ಯಾಚರಣೆಯನ್ನು ನಡೆಸಿದರು.

ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿ.ಎ. ಕಾಲೇಜಿನ ಎರಡು ಬಸ್ಗಳನ್ನು ತಡೆದು 87 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿದ್ದು, ಎಲ್ಲರ ಫಲಿತಾಂಶವೂ ನೆಗೆಟಿವ್ ಆಗಿದೆ. ಇದು ಅತ್ಯಂತ ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇರೀತಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖಾಸಗಿ ಬಸ್ಗಳು ಹಾಗೂ ಕಾಲೇಜು ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸಲಾಯಿತು. ನಿಟ್ಟೆ ವಿಶ್ವವಿದ್ಯಾಲಯ (ಕೆ.ಎಸ್. ಹೆಗ್ಡೆ), ಕನಚೂರು ಇನ್ಸ್ಟಿಟ್ಯೂಟ್, ಪಿ.ಎ. ಕಾಲೇಜು, ಸೇಂಟ್ ಅಲೋಶಿಯಸ್ ಕಾಲೇಜು ಹಾಗೂ ಎಕ್ಕೂರು ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಒಳಪಟ್ಟಿದ್ದರು.
ಇಲ್ಲಿವರೆಗೆ ಒಟ್ಟು 103 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿದ್ದು, ಅವರಲ್ಲಿ 101 ಮಂದಿಯ ವರದಿ ನೆಗೆಟಿವ್ ಆಗಿದೆ. ಇನ್ನೂ 10 ಪರೀಕ್ಷೆಗಳು ಪ್ರಗತಿಯಲ್ಲಿದ್ದು, ದಿನಾಂತ್ಯಕ್ಕೆ ಒಟ್ಟು ಸುಮಾರು 200 ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪರೀಕ್ಷೆ ಪೂರ್ಣಗೊಳ್ಳಲಿದೆ. ಒಬ್ಬ ವಿದ್ಯಾರ್ಥಿ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಆತನ ವಿರುದ್ಧ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಉಳಿದ ಎಲ್ಲ ವಿದ್ಯಾರ್ಥಿಗಳ ವರದಿ ನೆಗೆಟಿವ್ ಆಗಿದೆ.
ಕೊಣಾಜೆ, ಇನೋಳಿ, ನಡುಪದವು, ದೇರಳಕಟ್ಟೆ ಪ್ರದೇಶಗಳ ಇಂಜಿನಿಯರಿಂಗ್, ವೈದ್ಯಕೀಯ, ಡಿಪ್ಲೊಮಾ ಹಾಗೂ ಅರೆವೈದ್ಯಕೀಯ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ಹಲವರು ಕೇರಳ ಮೂಲದ ವಿದ್ಯಾರ್ಥಿಗಳಾಗಿದ್ದು, ಈ ಹಿನ್ನೆಲೆ ಕೇರಳಕ್ಕೆ ತೆರಳುವ ಸುಮಾರು 10 ಬಸ್ಗಳನ್ನು ವಿವಿಧ ಸ್ಥಳಗಳಲ್ಲಿ ತಡೆದು ಪರಿಶೀಲನೆ ನಡೆಸಲಾಗಿದೆ.
ಈ ಕಾರ್ಯಾಚರಣೆ ಸೆನ್ ಎಸಿಪಿ ಹಾಗೂ ದಕ್ಷಿಣ ವಿಭಾಗದ ಎಸಿಪಿ ಉಳ್ಳಾಲ ಹಾಗೂ ಕೊಣಾಜೆ ಠಾಣಾಧಿಕಾರಿ ಅವರ ಮೇಲ್ವಿಚಾರಣೆಯಲ್ಲಿ ನಡೆದಿದ್ದು, ಮುಂದೆಯೂ ಇಂತಹ ದಿಢೀರ್ ಪರಿಶೀಲನೆಗಳು ಮುಂದುವರೆಯಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾದಕ ವಸ್ತು ವಿರೋಧಿ ಹೋರಾಟದಲ್ಲಿ ಪೊಲೀಸ್ ಇಲಾಖೆ, ನಾಗರಿಕ ಆಡಳಿತ, ಶಿಕ್ಷಣ ಸಂಸ್ಥೆಗಳು ಹಾಗೂ ನಾಗರಿಕ ಸಮಾಜ – ಮಾಧ್ಯಮಗಳ ಸಕ್ರಿಯ ಬೆಂಬಲದೊಂದಿಗೆ ನಡೆಸುತ್ತಿರುವ ನಿರಂತರ ಪ್ರಯತ್ನಗಳು ಉತ್ತಮ ಫಲ ನೀಡುತ್ತಿರುವುದು ಈ ಫಲಿತಾಂಶಗಳಿಂದ ಸ್ಪಷ್ಟವಾಗುತ್ತದೆ. ಮಾದಕ ವಸ್ತು ರಹಿತ ಮಂಗಳೂರು ಮತ್ತು ಮಾದಕ ವಸ್ತು ರಹಿತ ಶೈಕ್ಷಣಿಕ ಕ್ಯಾಂಪಸ್ಗಳ ನಿರ್ಮಾಣಕ್ಕೆ ಈ ಸಮೂಹ ಪ್ರಯತ್ನ ಮುಂದುವರೆಯಲಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.



