ಕೊಣಾಜೆ; ಕೊಣಾಜೆ ಠಾಣಾ ವ್ಯಾಪ್ತಿಯ ಅಡ್ಕರೆಪಡ್ಪು ಬಾಕಿಮಾರು ಪ್ರದೇಶದ 30 ಎಕರೆ ಜಾಗದಲ್ಲಿದ್ದ ಬಾವಿಯೊಂದರಲ್ಲಿ ಅಪರಿಚಿತ ಯುವಕನ ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಯುವ ಕಾಂಗ್ರೆಸ್ ಮುಖಂಡ ಸಿ.ಎಂ ರವೂಫ್ ಸೇರಿದಂತೆ ಬೆಳ್ಮ ಗ್ರಾ.ಪಂ ಸದಸ್ಯ ಸತ್ತಾರ್ ಸಿ.ಎಂ, ಕೊಣಾಜೆ ಗ್ರಾ.ಪಂ ಸದಸ್ಯ ಇಕ್ಬಾಲ್ , ಫಾರುಕ್ ಬೆಳ್ಮ, ಇರ್ಫಾನ್ ಎಂಬವರು ಕೊಣಾಜೆ ಪೊಲೀಸರಿಗೆ ಸಹಕರಿಸಿ ಮಾನವೀಯತೆ ಮೆರೆದಿದ್ದಾರೆ.

30ರ ಹರೆಯದ ಯುವಕನ ಮೃತದೇಹ ಇದಾಗಿದ್ದು, ಟೀ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ. ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿರುವುದರಿಂದ ಬಾವಿಗೆ ಬಿದ್ದು ಅಂದಾಜು 15 ದಿನಗಳ ಮೇಲೆ ಆಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. 30 ಎಕರೆ ಪ್ರದೇಶ ಖಾಸಗಿ ಒಡೆತನದಾಗಿದ್ದು, ಕೃಷಿ ಮಾತ್ರವಿದೆ. ಜ.5ರಂದು ಸಿಯಾಳ ಕೀಳಲು ಬಂದಿದ್ದ ವ್ಯಕ್ತಿ ಬಾವಿಯಲ್ಲಿ ಮೃತದೇಹ ತೇಲುವುದನ್ನು ಗಮನಿಸಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿರುವುದರಿಂದಾಗಿ ಪತ್ತೆ ಅಸಾಧ್ಯವಾಗಿದೆ.

ಸ್ಥಳೀಯವಾಗಿ ನಾಪತ್ತೆ ಪ್ರಕರಣಗಳು ಇಲ್ಲದೇ ಇದ್ದು, ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



