UN NETWORKS
ಕುರ್ನಾಡು: ನಮ್ಮ ಸಂಸ್ಕೃತಿ, ಪರಂಪರೆ, ಧಾರ್ಮಿಕ ಚಿಂತನೆಗಳನ್ನು ದೇಶದ ಸರ್ಕಾರಿ ವ್ಯವಸ್ಥೆ ಉಳಿಸಿ, ಬೆಳೆಸುವ ವಿಶ್ವಾಸವಿಲ್ಲ. ಜನರೇ ಆ ಕೆಲಸ ಮಾಡಬೇಕು ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದ್ದಾರೆ.


ಬಂಟ್ವಾಳ ತಾಲೂಕು ಅಮ್ಮೆಂಬಳದ ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಅಷ್ಟಬಂಧ ಸಹಸ್ರಕುಂಭಾಭಿಷೇಕ ಉತ್ಸವ ಪ್ರಯುಕ್ತ ಸೋಮವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು. ನಮ್ಮ ನಾಡಿನಲ್ಲಿ ನಾಗರಿಕತೆಯೊಂದಿಗೇ ಶಾಸ್ತ್ರೀಯ, ಜನಪದ ಚಿಂತನೆಗಳು ಬೆಳೆದುವ ಬಂದಿವೆ. ಆದರೂ ಜಾಗತಿಕ ಚಿಂತನೆ ಎದುರು ಪರಂಪರೆಯ ಚಿಂತನೆ, ಭಾಷೆಯ ಚಿಂತನೆ ಮಾಯವಾಗ್ತಾ ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಡಾ.ಆಳ್ವ, ಜಪಾನ್ನಂತಹ ದೇಶದಲ್ಲೂ ಇಂದು ಧಾರ್ಮಿಕ ಚಿಂತನೆಗಳು ಮರೆಯಾಗುತ್ತಾ ಇವೆ. ಅಮೆರಿಕಾದಂತಹ ದೇಶಗಳಲ್ಲೂ ಆರಾಧನಾ ಕೇಂದ್ರಗಳಿಗೆ ಆಸ್ತಿಕರ ಭೇಟಿಯ ಸಂಖ್ಯೆ ಇಳಿಮುಖವಾಗುತ್ತಿದೆ. ಏನೇ ಆದರೂ ಭಾರತೀಯ ರಕ್ತದಿಂದ ಧಾರ್ಮಿಕ ಚಿಂತನೆಯನ್ನು ತೆಗೆಯಲು ಯಾರಿಗೂ ಸಾಧ್ಯವಿಲ್ಲ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಕಲಾವಿದ, ವಿದ್ವಾಂಸ ಕದ್ರಿ ನವನೀತ ಶೆಟ್ಟಿ, ಸ್ವತಂತ್ರ ಭಾರತದ ಸರ್ಕಾರಿ ವ್ಯವಸ್ಥೆಯಲ್ಲಿ ಹೊಸ ದೇವಸ್ಥಾನಗಳನ್ನು ಕಟ್ಟಿಸುವ ಪ್ರವೃತ್ತಿ ಬೆಳೆದಿಲ್ಲ. ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ರಾಜಕೀಯ ಹಸ್ತಕ್ಷೇಪಗಳು ನಡೆಯುತ್ತಿದ್ದು, ಕ್ಷೇತ್ರದ ಮಹತ್ವ ತಿಳಿಯದ ಪರವೂರ ಅಧಿಕಾರಿಗಳ ಕೈಯ್ಯಲ್ಲಿ ದೇವಸ್ಥಾನದ ಆಡಳಿತ ಇರುತ್ತದೆ ಎಂದರು. ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲ ಮಾತನಾಡಿ, ಎಲ್ಲರೂ ದೇವರ ಮಕ್ಕಳು ಎಂದು ಸಾರುವ ಸಂಧರ್ಭ ಬ್ರಹ್ಮಕಲಶೋತ್ಸವ. ದೇವಸ್ಥಾನ, ಭಜನಾ ಮಂದಿರಗಳಿಗೆ ಹೋದಾಗ ಸಿಗುವ ಸಮಾಧಾನ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವಿಪ್ರಸಾದ್ ಶೆಟ್ಟಿ ಕಲ್ಲಾಡಿ ಉದ್ಘಾಟಿಸಿದರು. ಗಂಜಿಮಟ ರಾಜ್ ಅಕಾಡೆಮಿಯ ಯತಿರಾಜ್ ಶೆಟ್ಟಿ, ಸೋಮೇಶ್ವರ ಸೋಮನಾಥೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರವೀಂದ್ರನಾಥ ರೈ, ಉದ್ಯಮಿ ರಂಗನಾಥ ಪೂಂಜ, ಅಜೆಕಳಗುತ್ತು, ಬಂಟ್ವಾಳ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಆಡಳಿತ ಮೊಕ್ತೇಸರ .ಎಚ್.ಬಾಲಕೃಷ್ಣ ನಾಯ್ಕ್ ಕುರ್ನಾಡು ಗುತ್ತು, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ವೆಂಕಪ್ಪ ಕಾಜವ ಮಿತ್ತಕೋಡಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಿವಶಂಕರ ಭಟ್ ಕಾಡಿಮಾರು, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಗಣೇಶ ನಾಯ್ಕ್ ಕುರ್ನಾಡುಗುತ್ತು, ತಿಮ್ಮಪ್ಪ ಕೊಂಡೆ ಯಾನೆ ಮಂಜು ಭಂಡಾರಿ, ಗುಣಕರ ಆಳ್ವ, ಸುದರ್ಶನ ಶೆಟ್ಟಿ, ರಾಜೇಶ್ ಶೆಟ್ಟಿ ಪಜೀರುಗುತ್ತು ಮತ್ತಿತರರು ಹಾಜರಿದ್ದರು.
ಸುರಕ್ಷಾ ಭಂಡಾರಿ, ಸುಧಿಕ್ಷಾ ಭಂಡಾರಿ, ಸ್ವಾತಿ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವದ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಟಿ.ಜಿ.ರಾಜಾರಾಮ ಭಟ್ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ ಪಜೀರುಗುತ್ತು ಪ್ರಾಸ್ತಾವಿಕ ಮಾತನಾಡಿದರು. ಸುಕೇಶ ಚೌಟ ಉಳ್ಳಾಲಗುತ್ತು ನಿರೂಪಿಸಿದರು. ರಾಜೀವ ಸಾಲ್ಯಾನ್ ವಂದಿಸಿದರು.


