UN NETWORKS
ದೇರಳಕಟ್ಟೆ: ಪದವಿ ಪ್ರದಾನವಾದಾಗ ಪದವೀಧರರಿಗಿಂತಲೂ ಪೋಷಕರು ತಮ್ಮ ಅದೆಷ್ಟೋ ವರ್ಷಗಳ ಶ್ರಮಕ್ಕೆ ಸಾರ್ಥಕ್ಯ ಕಾಣುವಂತಹ ದಿನವಾಗಿದ್ದು, ಪದವೀಧರು ಉನ್ನತ ಶಿಕ್ಷಣ ಹಾಗೆಯೇ ವೃತ್ತಿ ಬದುಕಿನಲ್ಲಿ ಶಿಸ್ತು ಹಾಗೂ ಮಾನವೀಯ ಮೌಲ್ಯಗಳನ್ನು ಕಾಪಾಡುತ್ತಾ ಪೋಷಕರು, ಶಿಕ್ಷಣ ನೀಡಿದ ಗುರುಗಳು ಹಾಗೂ ಶಿಕ್ಷಣ ಪಡೆದ ವಿದ್ಯಾಸಂಸ್ಥೆಯ ಹೆಸರು ಬೆಳಗಿಸುವ ಕಾರ್ಯ ಮಾಡಬೇಕು ಎಂದು ಮಂಗಳೂರು ವಿವಿಯ ಕುಲಸಚಿವ ಪ್ರೊ.ಎ.ಎಂ. ಖಾನ್ ಹೇಳಿದರು.
ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಡಿಟೋರಿಯಂನಲ್ಲಿ ಶನಿವಾರ ನಡೆದ ನಿಟ್ಟೆ ಪರಿಗಣಿಸಲಾಗಿರುವ ವಿವಿಯ ಅಧೀನದ ನಿಟ್ಟೆ ವಾಕ್ ಮತ್ತು ಶ್ರವಣ ಕಾಲೇಜು ಒಂಬತ್ತನೇ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ವಾಕ್ ಮತ್ತು ಶ್ರವಣ ಸಂಬಂಧಿ ಶಿಕ್ಷಣ ಪಡೆಯುವುದರಿಂದ ಅಶಕ್ತರ ಸೇವೆ ಮಾಡುವಂತಹ ಅವಕಾಶ ಲಭಿಸುತ್ತದೆ. ಹಾಗೆಯೇ ಪದವೀಧರರು ತಾವು ಗೈದ ಪ್ರತಿಜ್ಞೆಗೆ ಬದ್ಧವಾಗಿ ಬದುಕಬೇಕು. ಡಾ. ಎ.ಪಿ.ಜೆ. ಕಲಾಂ, ವಿವೇಕಾನಂದ ಅವರಂತೆ ಶಾಶ್ವತವಾದ ವ್ಯಕ್ತಿತ್ವ ಉಳಿಸಿಕೊಳ್ಳುವತ್ತ ಕಠಿಣ ಶ್ರಮ ವಹಿಸಿ ಉದ್ದೇಶಿತ ಗುರಿ ತಲುಪಬೇಕು. ಸಮಾಜದಲ್ಲಿ ಅಶಕ್ತರಿಗೆ ಸೇವೆ ಮಾಡುವ ಸೌಭಾಗ್ಯ ಒದಗಿದ್ದು ಆ ಸೇವೆಯನ್ನು ಮನಪೂರ್ವಕವಾಗಿ ಮಾಡಬೇಕು.ಭಾರತದ ದೊಡ್ಡ ಶಕ್ತಿ ಯುವ ಜನತೆಯಾಗಿದ್ದು ಪ್ರತಿ ಹಂತದಲ್ಲೂ ಲಕ್ಷ್ಯ ಮುಟ್ಟುವ ತನಕ ಪ್ರಯತ್ನಿಸಬೇಕು ಎಂದರು.
ಯುವಜನತೆ ತಮಗೆ ಸಿಕ್ಕ ಅಮೂಲ್ಯವಾದ ಸಮಯವನ್ನು ಯಾವುದೇ ಕಾರಣಕ್ಕೂ ಪೋಲಾಗದಂತೆ ನೋಡಬೇಕು. ಮೊಬೈಲ್, ಅಂತರ್ಜಾಲದ ಬಳಕೆಯ ನಮ್ಮ ಹಾಗೂ ಸಮಾಜದ ಏಳಿಗೆಗೆ ಪೂರಕವಾಗಿರಬೇಕು. ಉತ್ತಮ ಭವಿಷ್ಯ ನಿರ್ಮಾಣ ದೃಷ್ಟಿಯಿಂದ ಪದವಿ ಪಡೆಯುವುದೊಂದೇ ಜ್ಞಾನಕ್ಕೆ ಸೀಮಿತವಾಗಬಾರದು. ಪ್ರತಿ ಶಿಕ್ಷಣವೂ ನಮ್ಮ ಜ್ಞಾನ ಹಾಗೂ ಕೌಶಲ್ಯದ ವೃದ್ಧಿಗೆ ಪೂರಕವಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮನ್ನು ನಾವು ಇತರರ ಜೊತೆ ಹೋಲಿಸಿ ನೋಡಲೇಬಾರದು ಎಂದು ನುಡಿದರು.ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಪದವೀಧರರಲ್ಲಿ ಸಾಧನೆಯ ತುಡಿತ ಸದಾ ಇರಬೇಕು. ಏನಾದರೂ ಉನ್ನತವಾದುದನ್ನು ಸಾಧಿಸಬೇಕು. ಉನ್ನತ ಶಿಕ್ಷಣ, ವೃತ್ತಿ ಬದುಕಿನಲ್ಲಿ ಮುನ್ನಡೆಯುವಾಗ ಯಶಸ್ಸಿಗಾಗಿ ಶ್ರಮಿಸಬೇಕು. ಆ ಮೂಲಕ ಜ್ಞಾನವಂತ, ಗುಣವಂತರಾಗಿ ಗುರುತಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕಾರಿಸಲಾಯಿತು. ಶರೆಲ್ ಲೋಪೆಸ್ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಆಗಿ ಹೊರಹೊಮ್ಮಿದರು. ವಾಕ್ ಮತ್ತು ಶ್ರವಣ ಪರೀಕ್ಷೆಯಲ್ಲಿ 2015-19ರ ಸಾಲಿನಲ್ಲಿ ಮಂಗಳೂರು ವಿವಿಯ ಪ್ರಥಮ ರಾವ್ಯಂಕ್ ಪಡೆದ ಸಹನಾ ಹಾಗೂ ದ್ವಿತೀಯ ರ್ಯಾಂಕ್ ಪಡೆದ ಸ್ಪೂರ್ತಿ ಜಿ.ಎನ್ ಅವರಿಗೆ ನಗದು ಬಹುಮಾನ, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಲಾಯಿತು. ಶರೆಲ್ ಲೋಪೆಸ್ ಕಾಲೇಜು ಜೀವನ ಅನಿಸಿಕೆ ಹಂಚಿಕೊಂಡರು.
ನಿಟ್ಟೆ ವಾಕ್ ಮತ್ತು ಶ್ರವಣ ಕಾಲೇಜು ನಿರ್ದೇಶಕ ಪ್ರೊ. ಟಿ. ದತ್ತಾತ್ರೇಯ ಸ್ವಾಗತಿಸಿದರು. ಕಾಲೇಜು ಪ್ರಿನ್ಸಿಪಾಲ್ ಶ್ವೇತಾ ಪದವಿ ಪ್ರದಾನ ಪ್ರತಿಜ್ಞಾ ವಿಧಿ ಬೋಧಿಸಿದರು. ಅಸೋಸಿಯೇಟ್ ಪ್ರೊಫೆಸರ್ ದೀಪ್ತಿ ಕೆ.ಜೆ ಪದವೀಧರರ ಹೆಸರು ವಾಚಿಸಿದರು. ಉಪನ್ಯಾಸ ಕಿ ಅಖಿಲಾ ರಾಹುಲ್ ಕಾರ್ಯಕ್ರಮ ನಿರೂಪಿಸಿದರು.ಉಪನ್ಯಾಸಕಿ ಅರ್ಚನಾ ರೈ ವಂದಿಸಿದರು.


