UN NETWORKS
ದೇರಳಕಟ್ಟೆ: ಪದವಿ ಪ್ರದಾನವಾದಾಗ ಪದವೀಧರರಿಗಿಂತಲೂ ಪೋಷಕರು ತಮ್ಮ ಅದೆಷ್ಟೋ ವರ್ಷಗಳ ಶ್ರಮಕ್ಕೆ ಸಾರ್ಥಕ್ಯ ಕಾಣುವಂತಹ ದಿನವಾಗಿದ್ದು, ಪದವೀಧರು ಉನ್ನತ ಶಿಕ್ಷಣ ಹಾಗೆಯೇ ವೃತ್ತಿ ಬದುಕಿನಲ್ಲಿ ಶಿಸ್ತು ಹಾಗೂ ಮಾನವೀಯ ಮೌಲ್ಯಗಳನ್ನು ಕಾಪಾಡುತ್ತಾ ಪೋಷಕರು, ಶಿಕ್ಷಣ ನೀಡಿದ ಗುರುಗಳು ಹಾಗೂ ಶಿಕ್ಷಣ ಪಡೆದ ವಿದ್ಯಾಸಂಸ್ಥೆಯ ಹೆಸರು ಬೆಳಗಿಸುವ ಕಾರ್ಯ ಮಾಡಬೇಕು ಎಂದು ಮಂಗಳೂರು ವಿವಿಯ ಕುಲಸಚಿವ ಪ್ರೊ.ಎ.ಎಂ. ಖಾನ್ ಹೇಳಿದರು.
ಯುವಜನತೆ ತಮಗೆ ಸಿಕ್ಕ ಅಮೂಲ್ಯವಾದ ಸಮಯವನ್ನು ಯಾವುದೇ ಕಾರಣಕ್ಕೂ ಪೋಲಾಗದಂತೆ ನೋಡಬೇಕು. ಮೊಬೈಲ್, ಅಂತರ್ಜಾಲದ ಬಳಕೆಯ ನಮ್ಮ ಹಾಗೂ ಸಮಾಜದ ಏಳಿಗೆಗೆ ಪೂರಕವಾಗಿರಬೇಕು. ಉತ್ತಮ ಭವಿಷ್ಯ ನಿರ್ಮಾಣ ದೃಷ್ಟಿಯಿಂದ ಪದವಿ ಪಡೆಯುವುದೊಂದೇ ಜ್ಞಾನಕ್ಕೆ ಸೀಮಿತವಾಗಬಾರದು. ಪ್ರತಿ ಶಿಕ್ಷಣವೂ ನಮ್ಮ ಜ್ಞಾನ ಹಾಗೂ ಕೌಶಲ್ಯದ ವೃದ್ಧಿಗೆ ಪೂರಕವಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮನ್ನು ನಾವು ಇತರರ ಜೊತೆ ಹೋಲಿಸಿ ನೋಡಲೇಬಾರದು ಎಂದು ನುಡಿದರು.ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಪದವೀಧರರಲ್ಲಿ ಸಾಧನೆಯ ತುಡಿತ ಸದಾ ಇರಬೇಕು. ಏನಾದರೂ ಉನ್ನತವಾದುದನ್ನು ಸಾಧಿಸಬೇಕು. ಉನ್ನತ ಶಿಕ್ಷಣ, ವೃತ್ತಿ ಬದುಕಿನಲ್ಲಿ ಮುನ್ನಡೆಯುವಾಗ ಯಶಸ್ಸಿಗಾಗಿ ಶ್ರಮಿಸಬೇಕು. ಆ ಮೂಲಕ ಜ್ಞಾನವಂತ, ಗುಣವಂತರಾಗಿ ಗುರುತಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕಾರಿಸಲಾಯಿತು. ಶರೆಲ್ ಲೋಪೆಸ್ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಆಗಿ ಹೊರಹೊಮ್ಮಿದರು. ವಾಕ್ ಮತ್ತು ಶ್ರವಣ ಪರೀಕ್ಷೆಯಲ್ಲಿ 2015-19ರ ಸಾಲಿನಲ್ಲಿ ಮಂಗಳೂರು ವಿವಿಯ ಪ್ರಥಮ ರಾವ್ಯಂಕ್ ಪಡೆದ ಸಹನಾ ಹಾಗೂ ದ್ವಿತೀಯ ರ್ಯಾಂಕ್ ಪಡೆದ ಸ್ಪೂರ್ತಿ ಜಿ.ಎನ್ ಅವರಿಗೆ ನಗದು ಬಹುಮಾನ, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಲಾಯಿತು. ಶರೆಲ್ ಲೋಪೆಸ್ ಕಾಲೇಜು ಜೀವನ ಅನಿಸಿಕೆ ಹಂಚಿಕೊಂಡರು.