UN NETWORKS
ಉಳ್ಳಾಲ : ಉಳ್ಳಾಲದ ಅಬ್ಬಕ್ಕ ಉತ್ಸವ ಸಮಿತಿ ಹಲವು ವರ್ಷಗಳಿಂದ ಆಯೋಜಿಸುತ್ತಾ ಬರುತ್ತಿದ್ದ ಅಬ್ಬಕ್ಕ ಉತ್ಸವ ಹಲವು ಆರೋಪಗಳಿಂದ ಈ ಬಾರಿ ಸಮಿತಿ ಕೈತಪ್ಪಿ ಜಿಲ್ಲಾಡಳಿತ ಆಯೋಜಿಸಿದರೂ, ವೀರರಾಣಿ ಅಬ್ಬಕ್ಕಳ ಹೆಸರಿನಲ್ಲಿ ನಡೆದ ಕಾರ್ಯಕ್ರಮ ಹಿಂದಿನಂತೆಯೇ ಪ್ರೇಕ್ಷಕರಿಲ್ಲದೆ ಕಳೆಗುಂದಿತು. ಆದರೆ ಉಳ್ಳಾಲ ಕಡಲತೀರದಲ್ಲಿ ಆಯೋಜಿಸಿದ್ದ ಬೀಚ್ ಉತ್ಸವಕ್ಕೆ ಜನ ಮುಗಿಬಿದ್ದು ಯಶಸ್ವಿಯಾಗಿ ನಡೆಯಿತು.


ಉಳ್ಳಾಲ- ಮೊಗವೀರಪಟ್ನ ಕಡಲತೀರದಲ್ಲಿ ಬೃಹತ್ ಆಗಿ ಸಜ್ಜಾದ ವೇದಿಕೆಯನ್ನು ನಿರ್ಮಿಸಲಾಗಿತ್ತು. ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳನ್ನು ವೀಕ್ಷಿಸಲು ಅಲ್ಲಲ್ಲಿ ತಡೆಗಳನ್ನು ಅಳವಡಿಸಿ ಕುರ್ಚಿಗಳನ್ನು ಹಾಕಲಾಗಿತ್ತು. ಶನಿವಾರ ಚಾಲನೆಗೊಂಡ ಅಬ್ಬಕ್ಕ ಉತ್ಸವದ ಮೆರವಣಿಗೆಯಲ್ಲಿ ಜನ ಸೇರಿದ್ದರೂ, ಬಳಿಕ ವೇದಿಕೆಯಲ್ಲಿ ನಡೆದ ಕಾರ್ಯಕ್ರಮ ಪ್ರೇಕ್ಷಕರಿಲ್ಲದೆ ಖಾಲಿ ಕುರ್ಚಿಗಳಿಗೆ ನಡೆಯಿತು. ಸಮುದ್ರ ಸುತ್ತಲೂ ಜನ ಸೇರಿದರೂ ವೇದಿಕೆಯ ಕಾರ್ಯಕ್ರಮವನ್ನು ವೀಕ್ಷಿಸಲು ಪ್ರೇಕ್ಷಕರೇ ಇರಲಿಲ್ಲ. ಭಾನುವಾರ ಬೆಳಗ್ಗೆ ನಡೆದ ಆಟೋಟ ಸ್ಪರ್ಧೆ, ಮೀನು ಹಿಡಿಯುವುದು, ದೋಣಿ ಹಿಡಿಯುವ ಸ್ಪರ್ಧೆಗಳಲ್ಲಿ ಸ್ಪರ್ಧಾಳುಗಳು ಸೇರಿದಂತೆ ಸುಡುಬಿಸಿಲಿನಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು. ಆದರೆ ಕವಿಗೋಷ್ಠಿ ಆಗಲಿ ಸಂಜೆ ಡೆದ ಪ್ರಶಸ್ತಿ ಪ್ರಧಾನ ಸಮಾರಂಭದವರೆಗೂ ಖಾಲಿ ಕುರ್ಚಿಗಳೇ ಎದ್ದುಕಾಣುತಿತ್ತು. ಜಿಲ್ಲಾಡಳಿತ ಲೆಕ್ಕಾಚಾರದಿಂದ ನಡೆಸಿದ ಕಾರ್ಯಕ್ರಮವೂ ಯಶಸ್ವಿಯಾಗಿ ನಡೆಯಲಿಲ್ಲ ಅನ್ನುವುದು ಸ್ಥಳೀಯರ ಆರೋಪವಾಗಿತ್ತು.ಅಧಿಕಾರಿಗಳು-ಸ್ಥಳೀಯರಲ್ಲಿ ಸಂವಹನ ಕೊರತೆ : ನಿಗದಿತ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದರೂ, ಸ್ವಯಂ ಸೇವಕರ ಕೊರತೆಯಿಂದ ಅಧಿಕಾರಿಗಳೇ ಹಲವೆಡೆ ಪೇಚಾಡುವಂತಹ ಸ್ಥಿತಿ ನಿರ್ಮಾಣವಾಯಿತು. ಶಿಸ್ತಿನಿಂದ ಕಾರ್ಯಕ್ರಮಗಳು ನಡೆದರೂ, ಹಿಂದಿನ ಸಮಿತಿ ಆಯೋಜಿಸುತ್ತಿದ್ದ ಕಾರ್ಯಕ್ರಮದ ಅಬ್ಬರ ಇಂದು ಕಾಣಲಿಲ್ಲ. ವೇದಿಕೆಯಲ್ಲಿಯೂ ಬೆರಳೆಣಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಭಾಗವಹಿಸಿ ಅಬ್ಬಕ್ಕ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಆದರೆ ಸ್ಥಳೀಯಾಡಳಿತದ ಸದಸ್ಯರಾಗಲಿ, ಹಿರಿಯರನ್ನಾಗಲಿ , ಸ್ಥಳೀಯ ಜನಪ್ರತಿನಿಧಿಗಳಿಗೆ ಮನ್ನಣೆಯೇ ನೀಡದೆ ಕಾರ್ಯಕ್ರಮ ಮಂಗಳೂರಿನ ಅಧಿಕಾರಿಗಳಿಗೆ ಮಾತ್ರ ಸೀಮಿತವಾದಂತಿತ್ತು.
ಬೀಚ್ ಉತ್ಸವ ಯಶಸ್ವಿ : ಉಳ್ಳಾಲ ಕಡಲತೀರದಲ್ಲಿ ಜೋಕಾಲಿ, ಟೊರೆಟೊರೊ, ಡ್ರ್ಯಾಗನ್, ತೂಗುವ ತೊಟ್ಟಿಲುಗಳಲ್ಲಿ ಆಟಕ್ಕೆ ಜನ ಜಮಾಯಿಸಿದ್ದರು. ಸಂತೆ ವ್ಯಾಪಾರಿಗಳಿಗೂ ಉತ್ತಮ ವ್ಯಾಪಾರಗಳು ನಡೆದಿದೆ. ಏಳು ವರ್ಷಗಳ ಹಿಂದೆ ಉಳ್ಳಾಲದ ಮೊಗವೀರರು ನಡೆಸಿದಂತಹ ಬೀಚ್ ಉತ್ಸವದಂತೆಯೇ, ಇಂದು ನಡೆದ ಬೀಚ್ ಉತ್ಸವ ಯಶಸ್ವಿಯಾದರೂ,, ವೀರ ರಾಣಿ ಅಬ್ಬಕ್ಕಳ ಉತ್ಸವ ಯಶಸ್ವಿಯಾದಂತೆ ಮೇಲ್ನೋಟಕ್ಕೆ ಕಂಡುಬರಲಿಲ್ಲ.


