UN NETWORKS
ಇರಾ: ಶಬರಿಮಲೆಗೆ 40ರ ಹರೆಯದ ಮಹಿಳೆಯರಿಬ್ಬರು ಪ್ರವೇಶಗೈದ ಘಟನೆಯಿಂದ ಮನಸ್ಸಿಗೆ ತೀವ್ರ ಆಘಾತವಾಗಿದ್ದ ನಿರಂತರ 17 ವರ್ಷಗಳ ಕಾಲ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿದ್ದ ಗುರುಸ್ವಾಮಿಯೋರ್ವರು ಇರುಮುಡಿ ಕಟ್ಟುತ್ತಿರುವಾಗಲೇ ಸಾವನ್ನಪ್ಪಿರುವ ಘಟನೆ ಇರಾ ಮೂಳೂರಿನಲ್ಲಿ ಇಂದು ನಡೆದಿದೆ.
ಮೂಳೂರು ನಿವಾಸಿ ಸುರೇಶ್ ಗುರುಸ್ವಾಮಿ (56) ಮೃತರು. ತಿಂಗಳಿಗೊಮ್ಮೆ ಶಬರಿಮಲೆಗೆ ತೆರಳುವ ಸುರೇಶ್ ಗುರುಸ್ವಾಮಿಯವರು 17 ನೇ ಯಾತ್ರೆಗೆ ಹೋಗುವವರಿದ್ದರು. ಆ ಪ್ರಯುಕ್ತ ಸೋಮವಾರದಂದು ತನ್ನ ಊರಿನ 22 ಮಂದಿ ವೃತಧಾರಿಗಳ ಜೊತೆಗೆ ತೆರಳುವವರಿದ್ದರು. ಇರುಮುಡಿ ಕಟ್ಟುವ ಕಾರ್ಯಕ್ರಮಕ್ಕೆ ಸಹಸ್ರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಅನ್ನದಾನವನ್ನು ಆಯೋಜಿಸಲಾಗಿತ್ತು. ಆದರೆ ಸುರೇಶ್ ಗುರುಸ್ವಾಮಿಯವರು ಇರುಮುಡಿ ಕಟ್ಟುವ ಸಂದರ್ಭದಲ್ಲೇ ಹೃದಯಘಾತಕ್ಕೆ ಒಳಗಾಗಿ ಕುಸಿದುಬಿದ್ದು ಮೃತಪಟ್ಟಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸದಾ ಅಯ್ಯಪ್ಪನ ಧ್ಯಾನದಲ್ಲೇ ಇರುತ್ತಿದ್ದ ಇವರಿಗೆ ಇತ್ತೀಚೆಗೆ ಸಂಪ್ರದಾಯ ಮುರಿದು ಮಹಿಳೆಯರು ಪ್ರವೇಶಿಸಿರುವುದರಿಂದ ಆಘಾತಕ್ಕೆ ಒಳಗಾಗಿದ್ದರು. ಈ ಕುರಿತು ತನ್ನ ಜತೆಗಿರುವ ಅಯ್ಯಪ್ಪ ವೃತಧಾರಿಗಳ ಜತೆಗೆ ಅಳಲನ್ನು ತೋಡಿಕೊಂಡಿದ್ದರು. ಕೆಲ ದಿನಗಳ ಹಿಂದಷ್ಟೇ ಶಬರಿಮಲೆ ಹೋಗುವ ವಿಚಾರವಾಗಿ ಬೇಸರ ವ್ಯಕ್ತಪಡಿಸಿದ್ದರು ಎಂದು ಸ್ನೇಹಿತರೊಬ್ಬರು ತಿಳಿಸಿದ್ದರು.


