UN NETWORKS
ಹರೇಕಳ: ಶಿಕ್ಷಣ ಪಡೆದ ಬಳಿಕ ತಾನು ಏನಾಗಬೇಕು ಎನ್ನುವ ತೀರ್ಮಾನ ಶಾಲಾ ಜೀವನದಲ್ಲಿಯೇ ಕೈಗೊಳ್ಳಬೇಕಿದ್ದು ಈ ನಿಟ್ಟಿನಲ್ಲಿ ಶಿಸ್ತಿನ ವಿದ್ಯೆ ಪಡೆದು ಶಿಸ್ತಿನ ಜೀವನ ನಡೆಸಿದರೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಬಹುದು ಎಂದು ಕೊಣಾಜೆ ಠಾಣಾ ವೃತ್ತ ನಿರೀಕ್ಷಕ ರವಿ ನಾಯಕ್ ಅಭಿಪ್ರಾಯಪಟ್ಟರು.
ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಹಕಾರದಲ್ಲಿ ಶನಿವಾರ ನಡೆದ ವಾರ್ಷಿಕ ಕ್ರೀಡಾಕೂಟದ ವಂದನೆ ಸ್ವೀಕರಿಸಿ ಮಾತನಾಡಿದರು.ಶಿಸ್ತು ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖವಿದ್ದಂತೆ, ಹೂವು ಬಂಗಾರದ್ದಾದರೂ ಪರಿಮಳವಿಲ್ಲದಿದ್ದರೆ ನಿಷ್ಪ್ರಯೋಜಕ, ಕಲಿತ ಶಿಕ್ಷಣ ಇನ್ನೊಬ್ಬರಿಗೂ ಪ್ರಯೋಜನ ಆಗುವಂತೆ ನೋಡಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಹೇಳಿದರು.ಸಭಾ ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ ಮಾತನಾಡಿ, ಕನ್ನಡ ಶಾಲೆಗಳನ್ನು ಮುನ್ನಡೆಸುವುದು ಸುಲಭದ ಕೆಲಸವಲ್ಲ, ಆದರೂ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಶಿಸ್ತು ಬದ್ಧ ಕಲಿಕೆ, ಪಠ್ಯೇತರ ಚಟುವಟಿಕೆಗಳನ್ನು ನಡೆಸುತ್ತಿರುವ ರಾಮಕೃಷ್ಣ ಶಾಲೆ ಖಾಸಗಿ ಶಾಲೆಗಳಿಗಿಂತಲೂ ಉತ್ತಮವಾಗಿದೆ ಎಂದರು.
ಪಜೀರು ಮೆರ್ಸಿಯಮ್ಮನವರ ಇಗರ್ಜಿಯ ಧರ್ಮಗುರು ಫಾ.ಸುನಿಲ್ ವೇಗಸ್ ಅಧ್ಯಕ್ಷತೆ ವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಮೋಹನ್ ದಾಸ್ ಶೆಟ್ಟಿ ಉಳಿದೊಟ್ಟು, ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಪ್ರಹ್ಲಾದ್ ರೈ ಮುದಲೇಮಾರು, ಸದಸ್ಯರಾದ ಸೋಮಶೇಖರ್ ಚೌಟ, ಶಿಕ್ಷಕಿ ಎವುಜಿನ್ ಮುಖ್ಯ ಅತಿಥಿಗಳಾಗಿದ್ದರು.ಪ್ರೌಢಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ರೈ ಕಲ್ಲಿಮಾರ್ ಸ್ವಾಗತಿಸಿದರು. ಶಾಲಾ ಸಂಚಾಲಕ ಪಿ.ಜಯರಾಮ ಆಳ್ವ ಪೋಡಾರ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.
‘ ಕ್ರೀಡೆಯಲ್ಲಿರುವ ಆಕಸ್ಮಿಕ ಚಟುವಟಿಕೆಗಳು ಜೀವನಕ್ಕೆ ಪಾಠವಾಗಿದೆ. ಶಿಕ್ಷಣ ನಾಲ್ಕು ಗೋಡೆಗಳ ನಡುವೆ ಸಿಲುಕದಂತಾಗಲು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಮುಖ್ಯ’
ಸುನಿಲ್ ವೇಗಸ್, ಧರ್ಮಗುರು, ಮೆರ್ಸಿಯಮ್ಮನವರ ಇಗರ್ಜಿ


