ಉಡುಪಿ, ಆಗಸ್ಟ್ 07: ಜಿಲ್ಲೆಯ ಕುಂದಾಪುರದ ಬೆಳ್ಳಾಲದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಯುವಕನೋರ್ವನನ್ನು ಮನೆಗೆ ಕರೆಸಿದ ಯುವತಿಯ ಕುಟುಂಬಸ್ಥರು ಆತನನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ. ಸನತ್ ಎನ್ನುವ ಯುವಕನ ಮೇಲೆ ಪೈಶಾಚಿಕ ಕೃತ್ಯ ನಡೆಸಲಾಗಿದ್ದು, ಯುವತಿ ಮತ್ತು ಈತ ಒಂದೇ ಸಂಸ್ಥೆಯಲ್ಲಿ ಕೆಲಸಕ್ಕಿದ್ದರು. ಬಳಿಕ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು. ಇದೇ ಸಮಯದಲ್ಲಿ ಸನತ್ ನಿಂದ 50 ಸಾವಿರ ಹಣವನ್ನು ಯವತಿ ಸಾಲ ತೆಗೆದುಕೊಂಡಿದ್ದಳು ಎಂಬುದು ತಿಳಿದುಬಂದಿದೆ.

ದೂರು-ಪ್ರತಿದೂರುಗಳು ದಾಖಲು
ಸನತ್ನಿಂದ ಸಾಲ ಪಡೆದ ಬಳಿಕ ಯುವತಿ ಕೆಲಸ ತೊರೆದಿದ್ದಲ್ಲದೆ, ಈತನ ಕರೆ ಸ್ವೀಕರಸದೆ ಸತಾಯಿಸುತ್ತಿದ್ದಳು. ಸಾಲ ನೀಡಿದ್ದ 50 ಸಾವಿರ ಹಣ ವಾಪಸ್ಸು ಕೇಳಿದಾಗ ಮನೆಗೆ ಬರುವಂತೆ ಆಕೆ ತಿಳಿಸಿದ್ದಳು. ಯುವತಿ ಕರೆದಳೆಂದು ಮನೆ ಬಳಿ ಹೋಗಿದ್ದ ಸನತ್ ಮೇಲೆ ಹಲ್ಲೆ ನಡೆಸಲಾಗಿದ್ದು, ಸಾಲದ್ದಕ್ಕೆ ಆತನ ಮೇಲೆಯೇ ಅಟ್ರಾಸಿಟಿ ಕಾಯ್ದೆ, ಲೈಂಗಿಕ ದೌರ್ಜನ್ಯದಡಿ ದೂರು ದಾಖಲಿದ್ದಳು ಎಂದು ದೂರಲಾಗಿದೆ. ಘಟನೆ ಬಗ್ಗೆ ಯುವಕ ಸನತ್ ಕೂಡ ಬೈಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಆರೋಪಿಗಳ ಬಂಧನ
ಘಟನೆ ಸಂಬಂಧ ದೂರು-ಪ್ರತಿದೂರುಗಳು ದಾಖಲಾಗಿದ್ದು, ಮನೆಗೆ ನುಗ್ಗಿ ದಲಿತ ಯುವತಿ ಮೇಲೆ ದೌರ್ಜನ್ಯ ಆರೋಪ ಸಂಬಂಧ ಸನತ್ ಮತ್ತು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ ಪ್ರಕರಣದಲ್ಲಿ ರಾಮ ಕುಮಾರ್, ನಂದೀಶ್ ಕುಮಾರ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

