UN NETWORKS
ಉಳ್ಳಾಲ: ಅಸ್ಸಾಂ, ಒರಿಸ್ಸಾ ಭಾಗದಲ್ಲಿ ಬೀಸಿದ ಚಂಡಾಮಾರುತದ ಪರಿಣಾಮ ಉಳ್ಳಾಲ ಭಾಗದಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿದೆ. 41 ಮನೆಗಳು ಅಪಾಯದಂಚಿನಲ್ಲಿವೆ . ಉಳ್ಳಾಲದ ಕಿಲಿರಿಯಾನಗರ, ಕೈಕೋ, ಸುಭಾಷನಗರ, ಮುಕ್ಕಚ್ಚೇರಿ ಹಾಗೂ ಸೋಮೇಶ್ವರದ ಉಚ್ಚಿಲ ಪೆರಿಬೈಲು ಪ್ರದೇಶದಲ್ಲಿ ಮೂರು ಮನೆಗಳಿಗೆ ಅಲೆಗಳು ಅಪ್ಪಳಿಸಿದೆ.
ಮಂಗಳವಾರ ತಡರಾತ್ರಿಯಿಂದ ಅಲೆಗಳ ಅಬ್ಬರ ಹೆಚ್ಚಾಗಿ ಮನೆಗಳಿಗೆ ಅಪ್ಪಳಿಸಲು ಆರಂಭವಾಗಿದೆ. ಉಳ್ಳಾಲದ ಕೈಕೋ ಭಾಗದಲ್ಲಿರುವ ಎಂಟು ಮನೆಮಂದಿ ಮಳೆಗಾಲದ ಸಂದರ್ಭದಲ್ಲೇ ಬಾಡಿಗೆ ಮನೆಗಳಿಗೆ ತೆರಳಿದ್ದರೆ, ಅಲ್ಲೇ ಮನೆಗಳಲ್ಲಿರುವ ಮಂದಿಗೆ ತೊಂದರೆಯುಂಟಾಗಿದೆ. ಕಿಲಿರಿಯಾನಗರ, ಕೈಕೋ, ಸುಭಾಷನಗರ , ಮುಕ್ಕಚ್ಚೇರಿ ಭಾಗವನ್ನು ಹಿಂದಿನಿಂದಲೂ ಕಡೆಗಣಿಸಲಾಗುತ್ತಿದೆ. ಅತಿಹೆಚ್ಚು ಜನರಿರುವ ಪ್ರದೇಶ ಇದಾಗಿದ್ದರೂ ಯಾವುದೇ ರೀತಿಯ ಶಾಶ್ವತ ಪರಿಹಾರ ಯೋಜನೆಯನ್ನು ಕೈಗೊಂಡಿಲ್ಲ. ಸ್ಥಳೀಯ ಪ್ರದೇಶದಲ್ಲಿರುವ ರೆಸಾಟ್ ್, ಕಾರ್ಖಾನೆಗಳಿರುವ ಪ್ರದೇಶದಲ್ಲಿ ಶಾಶ್ವತ ಪರಿಹಾರವನ್ನು ಕೈಗೊಳ್ಳಲಾಗಿದೆ ಎಂದು ಸ್ಥಳೀಯರು ಆರೋಪಿಸಿದರು. ಕೈಕೋ ಭಾಗದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನಗರಸಭೆ ಚುನಾವಣೆಯಲ್ಲಿ ಜಯಗಳಿಸಿರುವುದರಿಂದ ಸಚಿವರು ಜನರ ಸುರಕ್ಷತೆಗೆ ಬೆಲೆ ನೀಡುತ್ತಿಲ್ಲ. ಅದಕ್ಕಾಗಿ ಜಿಲ್ಲಾಧಿಕಾರಿ ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ನೀಡಿ ಮನವಿ ಸಲ್ಲಿಸುವುದಾಗಿ ಸ್ಥಳಕ್ಕೆ ಭೇಟಿ ನೀಡಿರುವ ಜೆಡಿಎಸ್ ಮುಖಂಡರು ತಿಳಿಸಿದ್ದಾರೆ.
ರಸ್ತೆಗೆ ಅಪ್ಪಳಿಸಿದ ಅಲೆ
ಬೆಳಗ್ಗಿನಿಂದ ಉಚ್ಚಿಲದ ಪೆರಿಬೈಲು ಭಾಗದಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಪೆರಿಬೈಲು ಸೋಮೇಶ್ವರಕ್ಕೆ ಸಂಪರ್ಕಿಸುವ ಏಕೈಕ ರಸ್ತೆಯಲ್ಲಿ ನೀರು ತುಂಬಿತ್ತು. ಇದರಿಂದಾಗಿ ರಸ್ತೆಯಡಿ ಇರುವ ಮೋರಿಯೂ ಮರಳು ತುಂಬಿ ನೀರು ಹೋಗಲು ಸಾಧ್ಯವಾಗದೆ, ರಸ್ತೆಯಲ್ಲೇ ನೀರು ತುಂಬಿತ್ತು. ಪೆರಿಬೈಲು ಸಮೀಪದ ಮನೆಗಳ ಬಾವಿಗಳಿಗೆ ನೀರು ತುಂಬಿ ಕುಡಿಯಲು ನೀರಿನ ಅಭಾವ ಎದುರಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಸೋಮೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್ ಸಂಜೆಯೊಳಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಹಾಗೂ ಹಿಟಾಚಿಯಲ್ಲಿ ಮೋರಿಯನ್ನು ತೆರವುಗೊಳಿಸುವ ಭರವಸೆ ನೀಡಿದ್ದಾರೆ. ಸ್ಥಳಕ್ಕೆ ಸೋಮೇಶ್ವರ ಗ್ರಾ.ಪಂ ಅಧ್ಯಕ್ಷ ರಾಜೇಶ್ ಉಚ್ಚಿಲ್, ತಾ.ಪಂ ಅಧ್ಯಕ್ಷ ರವಿಶಂಕರ್, ನಗರಸಭೆ ಮಾಜಿ ಸದಸ್ಯ ಫಾರುಕ್ ಯು.ಹೆಚ್, ನಝೀರ್ ಉಳ್ಳಾಲ್, ನಗರಸಭೆ ಸದಸ್ಯರಾದ, ಮಹಮ್ಮದ್ ಮುಕ್ಕಚ್ಚೇರಿ, ಬಶೀರ್ ಕೋಟೆಪುರ, ಅಬ್ದುಲ್ ಜಬ್ಬಾರ್ , ನಗರಸಭೆ ಪೌರಾಯುಕ್ತೆ ವಾಣಿ ಆಳ್ವ, ಸೋಮೇಶ್ವರ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮನೋಹರ್ ಭೇಟಿ ನೀಡಿದ್ದರು.
`ಮುಖ್ಯಮಂತ್ರಿಯನ್ನು ಭೇಟಿ ಮಾಡುತ್ತೇವೆ’
ಕೈಕೋ, ಕಿಲೆರಿಯಾನಗರ, ಸುಭಾಷನಗರ ಹೆಚ್ಚಾಗಿ ಜನವಸತಿ ಇರುವ ಪ್ರದೇಶ. ಪ್ರತಿವರ್ಷವೂ ಈ ಭಾಗದ 41 ಮನೆಗಳು ತೊಂದರೆಗೆ ಒಳಗಾಗುತ್ತಲೇ ಬಂದಿದೆ. ಜನವಸತಿ ಇಲ್ಲದ ಪ್ರದೇಶಗಳಿಗೆ ತಾತ್ಕಾಲಿಕ ಪರಿಹಾರವನ್ನು ನಡೆಸಲಾಗುತ್ತಿದೆ. ಆದರೆ 3000 ದಷ್ಟು ಜನಸಂಖ್ಯೆ ಇರುವ ಪ್ರದೇಶವನ್ನು ಗಣನೆಗೆ ತೆಗೆಯಲಾಗುತ್ತಿಲ್ಲ. ಸರಕಾರ ಮತ್ತು ಜಿಲ್ಲಾಡಳಿತ ಈ ಬಾರಿಯಾದರೂ ಆದ್ಯತೆಯ ಮೇರೆಗೆ ಕಾರ್ಯನಿರ್ವಹಿಸಬೇಕಿದೆ. ಉಳ್ಳಾಲ ಭಾಗದ ಇತರೆಡೆ ಕಡಲ್ಕೊರೆತ ತಡೆಗೆ ಶಾಶ್ವತ ಮತ್ತು ತಾತ್ಕಾಲಿಕ ಪರಿಹಾರವನ್ನು ಕೈಗೊಳ್ಳಲಾಗಿದೆ. ಉಳ್ಳಾಲ ನಗರಸಭೆಗೆ ದೂರು ನೀಡಿದಾಗ, ತಾತ್ಕಾಲಿಕ ಪರಿಹಾರಕ್ಕಾಗಿ ಎಡಿಬಿಯಿಂದ ಕಲ್ಲುಹಾಕುವ ಗುತ್ತಿಗೆಗೆ ಟೆಂಡರ್ ಕರೆಯಲಾಗಿದೆ ಅನ್ನುವ ಪ್ರತಿಕ್ರಿಯೆ ದೊರೆತಿದೆ. ಆದರೆ ಈವರೆಗೂ ಜನರ ಕಷ್ಟಗಳನ್ನು ಆಲಿಸುವ ಪ್ರಯತ್ನ ಆಗಿಲ್ಲ. ಈ ನಿಟ್ಟಿನಲ್ಲಿ ಉಳ್ಳಾಲ ನಗರಸಭೆಗೆ ಜೆಡಿಎಸ್ ನಿಂದ ಚುನಾಯಿತಗೊಂಡ ನಾಲ್ವರು ಸದಸ್ಯರನ್ನು ಜತೆಗೂಡಿಸಿ ಈ ಭಾಗದ ಜನರ ಸಮಸ್ಯೆಯ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವುದಾಗಿ ಜೆಡಿಎಸ್ ಮುಖಂಡ ನಝೀರ್ ಉಳ್ಳಾಲ್ ತಿಳಿಸಿದರು.
` ಪ್ರದೇಶವನ್ನು ಕಡೆಗಣಿಸಲಾಗಿದೆ’
ಕೈಕೋ, ಕಿಲೆರಿಯಾನಗರ, ಸುಭಾಷನಗರ ಭಾಗದ ಮಂದಿಗೆ 3 ಸೆಂಟ್ಸ್ ಜಾಗ ಮತ್ತು 3.30 ಲಕ್ಷ ಕೊಡುವ ಭರವಸೆ ಪೊನ್ನುರಾಜ್ ಜಿಲ್ಲಾಧಿಕಾರಿ ಆಗಿದ್ದ ಸಂದರ್ಭ ನೀಡಿದ್ದರು. ಹೇಳಿಕೆಯ ನಂತರದ ಕೆಲ ತಿಂಗಳಲ್ಲೇ ಜಿಲ್ಲಾಧಿಕಾರಿ ವರ್ಗಾವಣೆಯಾಗಿದ್ದರು. 2017ರ ಎಪ್ರಿಲ್ ತಿಂಗಳಲ್ಲಿ ಬಮ್ ್ ವಿಚಾರದಲ್ಲಿ ಎಡಿಬಿ ಇಂಜಿನಿಯರ್ ಬಂದು ಸಹಿ ಸಂಗ್ರಹಿಸಿದ್ದರು. ಮೂರು ತಿಂಗಳಲ್ಲಿ 700 ಮೀ ಉದ್ದಕ್ಕೂ
ಮುಗಿಸುವ ವಿಶ್ವಾಸ ನೀಡಿದ್ದರು. ಆದರೆ ಈವರೆಗೂ ಬಮ್ ್ ಯೋಜನೆಯನ್ನು ಪೂರೈಸಿಲ್ಲ. ಬೇರೆಡೆ ಯೋಜನೆಯನ್ನು ಜಾರಿಗೊಳಿಸಿದ್ದರೂ ಈ ಭಾಗವನ್ನು ಕಡೆಗಣಿಸಲಾಗಿದೆ. ಕಡಲ್ಕೊರೆತ ಸಂದರ್ಭ ಹಾನಿಗೊಂಡ ಮನೆಗಳಿಗೆ ಕೇವಲ 3,000 ರೂ ಪರಿಹಾರ ನೀಡಿದ್ದಾರೆ. ಜಿಲ್ಲಾಧಿಕಾರಿಯವರನ್ನು ಇತ್ತೀಚೆಗೆ ಭೇಟಿ ಮಾಡಿದಾಗ ತಾತ್ಕಾಲಿಕ ಪರಿಹಾರ ಒದಗಿಸಲು ಅಸಾಧ್ಯ, ಎಲ್ಲಾ ಮನೆಮಂದಿ ಸ್ಥಳ ಖಾಲಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. 50 ಕಿ.ಮೀ ದೂರದಲ್ಲಿ ಸರಕಾರಿ ಜಾಗವನ್ನು ನೀಡುವುದಾಗಿ ಹೇಳುತ್ತಾರೆ. ಆದರೆ ಅಂತಹ ಪರ್ಯಾಯ ವ್ಯವಸ್ಥೆ ಅಗತ್ಯವಿಲ್ಲ. ಪ್ರತಿ ಮನೆಮಂದಿಯಲ್ಲಿ ರೇಷನ್ ಕಾರ್ಡು , ಡೋರ್ ನಂಬರ್ ಇದೆ. ಆದರೆ ಹಕ್ಕುಪತ್ರ ಈವರೆಗೆ ನೀಡಿಲ್ಲ. ಕೈಕೋ ಸಮೀಪವೇ ಉದ್ಯಮಿಯೋರ್ವರ ಹೊಸತಾದ ಕಾರ್ಖಾನೆ ನಿರ್ಮಾಣವಾಗುತ್ತಿದೆ. ಅದಕ್ಕಾಗಿ ಎಲ್ಲಾ ರೀತಿಯ ಅನುಮತಿಯನ್ನು ನೀಡಲಾಗಿದೆ. ಆದರೆ ಜನರಿರುವ ಪ್ರದೇಶವನ್ನು ಸಿಆರ್ ಝೆಡ್ ವ್ಯಾಪ್ತಿಯೆಂದು ಉಲ್ಲೇಖಿಸುತ್ತಿದ್ದಾರೆ ಎಂದು ಸ್ಥಳೀಯ ಖಾದರ್ ಆರೋಪಿಸಿದರು.
` ಕಾಂಗ್ರೆಸ್ಗೆ ವೋಟ್ ಹಾಕಿಲ್ಲವೆಂದು ಕಡೆಗಣಿಸುತ್ತಿದ್ದಾರೆ’
ಎಂಟು ಮನೆಗಳು ಹಾನಿಯಾಗಿ ಬಾಡಿಗೆ ಮನೆಯಲ್ಲಿ ಕುಳಿತಿದ್ದಾರೆ. ಮಳೆಗಾಲ ಸಂದರ್ಭ 3 ತಿಂಗಳು ಮನೆಗಳನ್ನು ಖಾಲಿ ಮಾಡುವಂತೆ ತಹಶೀಲ್ದಾರ್ ಸೂಚಿಸಿ ಬಾಡಿಗೆ ಮನೆಯಲ್ಲಿ ಇರುವಂತೆ ಹೇಳಿ ಬಾಡಿಗೆಯನ್ನು ಕೊಡುವುದಾಗಿ ತಿಳಿಸಿದ್ದರು. ಆದರೆ ಈವರೆಗೆ ಬಾಡಿಗೆ ಹಣಮನ್ನು ನೀಡಲಾಗಿಲ್ಲ. ಸಚಿವರ ಆಪ್ತಸಹಾಯಕರು ನೀವು ಕಾಂಗ್ರೆಸ್ಗೆ ವೋಟ್ ಹಾಕಿಲ್ಲ, ನಿಮ್ಮ ಕೆಲಸ ನಾವು ಮಾಡುವುದಿಲ್ಲ. ನೀವು ಜೆಡಿಎಸ್ ಅಲ್ಲ, ಅವರ ಬಳಿ ಹೋಗಿ’ ಎಂದು ಉಡಾಫೆಯಿಂದ ವರ್ತಿಸಿದ್ದಾರೆ ಎಂದು ಕೈಕೋ ನಿವಾಸಿ ಯು.ಟಿ.ಖಲೀಲ್ ಆರೋಪಿಸಿದರು.
ಸಂಜೆಯೊಳಗೆ ಕ್ರಮ
ಸೋಮೇಶ್ವರದ ಪೆರಿಬೈಲು ಭಾಗದಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿ ಬಾವಿಗಳಲ್ಲಿ ಉಪ್ಪು ನೀರು ತುಂಬಿ ಕುಡಿಯುವ ನೀರು ಉಪ್ಪಿನಾಂಶ ಸೇರಿಕೊಂಡಿದೆ. ಕುಡಿಯುವ ನೀರಿಗೆ ಟ್ಯಾಂಕರ್ ಮೂಲಕ ವ್ಯವಸ್ಥೆ ಮಾಡಲಾಗಿದೆ. ಕಡಲಬ್ಬರ ಜೋರಿರುವ ಕಾರಣ ಸಂಜೆ ನಂತರ ಹಿಟಾಚಿ ಚರಂಡಿ ತೆರವುಗೊಳಿಸಲಾಗುವುದು. 15-20 ಮನೆಗಳು ಮೊದಲಿನಿಂದಲೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಗಾಲ ಸಂದರ್ಭ ಮಾತ್ರವಲ್ಲ ಪ್ರತಿ ತಿಂಗಳಲ್ಲೂ ಜನತೆ ತೊಂದರೆಗೆ ಒಳಗಾಗುತ್ತಿದ್ದಾರೆ. ಮಳೆಗಾಲದಲ್ಲಿ ಉಚ್ಚಿಲದ ಜಟಾಯಿ ಭಾಗದಿಂದಲೂ ಮಳೆ, ತ್ಯಾಜ್ಯ ನೀರು ಸೂಕ್ತ ವ್ಯವಸ್ಥೆ ಇಲ್ಲದೆ ಈ ಭಾಗದಲ್ಲಿ ಹರಿದು ಜನರಿಗೆ ತೊಂದರೆಯಾಗುತ್ತಿದೆ. ಮರಳು ಕಳವುಗೈಯ್ಯುವ ವಿಚಾರದ ಕುರಿತು ಜಿಲ್ಲಾಡಳಿತದ ಗಮನ ಹರಿಸಿದ್ದೇವೆ. ಸ್ಥಳೀಯರಿಗೆ ವಿರೋಧಿಸಲು ಅಸಾಧ್ಯ. ಈ ಕುರಿತು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕಿದೆ ಎಂದು ಸೋಮೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್ ಹೇಳಿದರು.
`ಸಣ್ಣ ಗಾತ್ರದ ಕಲ್ಲು ಹಾಕಲಾಗಿದೆ’
ತಿತ್ಲೀ ಚಂಡಾಮಾರುತದ ಪರಿಣಾಮ 3 ಮನೆಗಳಿಗೆ ನೀರು ನುಗ್ಗಿದೆ. ಅಧಿಕಾರಿಗಳು ತಕ್ಷಣ ಭೇಟಿ ನೀಡಿ ಜನರಿಗೆ ವ್ಯವಸ್ಥೆ ಮಾಡಬೇಕಿದೆ. ಮೂರು ಮನೆಗಳ ಡ್ರೈನೇಜ್ ಸಂಪೂರ್ಣ ಹಾನಿಯಾಗಿದೆ. ಬಾವಿಯ ನೀರು ಕುಡಿಯಲು ಸಾಧ್ಯವಾಗುತ್ತಿಲ್ಲ. ಮರಳು ಕಳವು ಜಾಲದಿಂದಲೂ ಸಮುದ್ರದ ನೀರು ನೆರೆಯ ಮನೆಗಳಿಗೆ ಅಪ್ಪಳಿಸುತ್ತಿವೆ. ಬಂದರು, ಕೋಡಿ, ಕೈಕೋದಲ್ಲಿ ಬ್ರೇಕ್ ವಾಟರ್ ಅಳವಡಿಸಿದ ನಂತರ ಉಚ್ಚಿಲ ಭಾಗದಲ್ಲಿ ಅಪ್ಪಳಿಸಲು ಆರಂಭವಾಗಿದೆ. ಮಳೆಗಾಲದ ಸಂದರ್ಭ ಹಾಕಿರುವ ಕಲ್ಲುಗಳು ನಾಯಿಗೆ ಎಸೆಯುವ ಮತ್ತು ಮಾವಿನಹಣ್ಣಿಗೆ ಎಸೆಯುವ ಕಲ್ಲುಗಳ ಗಾತ್ರದಲ್ಲಿದೆ. ಈ ಭಾಗದಲ್ಲಿ ಶಾಶ್ವತ ತಡೆಗೋಡೆಯ ಪರಿಹಾರದ ಅಗತ್ಯವಿದೆ ಎಂದು ಪೆರಿಬೈಲ್ ನಿವಾಸಿ ಅಬ್ಬಾಸ್ ಹಾಜಿ ಹೇಳಿದರು.
ಮುಂಜಾಗ್ರತಾ ಕ್ರಮಕ್ಕೆ ಸೂಚನೆ
ಅಸ್ಸಾಂ, ಒರಿಸ್ಸಾ ದಲ್ಲಿ ಸಂಭವಿಸಿದ ತಿತ್ಲೀ ಚಂಡಾಮಾರುತದ ಹಿನ್ನೆಲೆಯಲ್ಲಿ ಉಳ್ಳಾಲ ಭಾಗದಲ್ಲಿಯೂ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿದೆ. 41 ಮನೆಗಳು ಅಪಾಯದಂಚಿನಲ್ಲಿದ್ದು, ಮುಂಜಾಗ್ರತಾ ಕ್ರಮವನ್ನು ಅನುಸರಿಸಲು ಸೂಚಿಸಲಾಗಿದೆ. ಬುಧವಾರ ಬೆಳಿಗ್ಗೆ ಕಿಲಿರಿಯಾನಗರದಲ್ಲಿರುವ ಅಂಗನವಾಡಿ ಮಕ್ಕಳನ್ನು ಮುಂಜಾಗ್ರತಾ ಕ್ರಮವಾಗಿ ಮನೆಗಳಿಗೆ ವಾಪಸ್ಸು ಕಳುಹಿಸಲಾಗಿದೆ. ಪೌರಾಯುಕ್ತೆ ವಾಣಿ ಆಳ್ವ ತಿಳಿಸಿದರು.


