UN NETWORKS
ಹರೇಕಳ: ಮೊದಲ ಹಂತದಲ್ಲಿ ಸಾಂಕೇತಿಕ ಬಸ್ ತಡೆ ನಡೆಸಲಾಗಿದೆ, ಮುಂದೆ ವಿವಿಧ ಹಂತದ ಹೋರಾಟ ನಡೆಯಲಿದ್ದು, ಆರ್ ಟಿ ಓ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆಯನ್ನೂ ಹಮ್ಮಿಕೊಳ್ಳಲಾಗುವುದು ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಎಚ್ಚರಿಸಿದರು.
ಸಮರ್ಪಕ ಸಾರಿಗೆ ವ್ಯವಸ್ಥೆ, ಹರೇಕಳದಿಂದ ಕೊಜಪಾಡಿಗೆ ಬಸ್ ಸೇವೆ ವಿಸ್ತರಿಸುವಂತೆ ಒತ್ತಾಯಿಸಿ ಸೋಮವಾರ ಹರೇಕಳ ಕಡವಿನ ಬಳಿ ಡಿವೈಎಫ್ಐ ವತಿಯಿಂದ ನಡೆದ ರಸ್ತೆತಡೆ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಹತ್ತು ವರ್ಷಗಳ ಹಿಂದೆ ಹರೇಕಳದ ಜನಸಂಖ್ಯೆ ಕಡಿಮೆಯಿದ್ದರೂ ಹತ್ತು ಬಸ್ ಪರವಾನಿಗೆಗಳಿದ್ದವು, ಆದರೆ ಇಂದು ಜನಸಂಖ್ಯೆ ಹೆಚ್ಚಾಗಿದ್ದು, ಗ್ರಾಮ ಅಭಿವೃದ್ಧಿಯನ್ನೂ ಕಂಡಿದೆ. ಆದರೆ ಬಸ್ಗಳಿಗಿದ್ದ ಪರವಾನಿಗೆ ಕಡಿಮೆಯಾಗಿದ್ದು, ಅದಕ್ಕಿಂತಲೂ ಕಡಿಮೆ ಬಸುಗಳು ಸಂಚರಿಸುತ್ತಿದೆ. ನರ್ಮ್ ಯೋಜನೆಯಡಿ ಹರೇಕಳಕ್ಕೆ ಬಸ್ಸುಗಳ ಅವಶ್ಯಕತೆ ಇರುವ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ಡಿವೈಎಫ್ಐ ಒತ್ತಾಯಿಸಿದ್ದ ಫಲವಾಗಿ ಅಧಿಕಾರಿಗಳು ಗ್ರಾಮದಲ್ಲಿ ಸರ್ವೇ ಮಾಡಿದ್ದರು. ಆದರೆ ನರ್ಮ್ ಬಸ್ಸುಗಳು ಬರದಿದ್ದು ಇದರ ಹಿಂದೆ ನಡೆದಿರುವ ಪಿತೂರಿಯಾದರೂ ಏನು ಎಂದು ಪ್ರಶ್ನಿಸಿದರು.
ರಾಜ್ಯದ ಎಲ್ಲಾ ಶಾಸಕರಿಗಿಂತಲೂ ಮಂಗಳೂರು ಕ್ಷೇತ್ರದ ಶಾಸಕ ಯು.ಟಿ.ಖಾದರ್ ಅವರು ಜನರ ಜೊತೆ ಹೆಚ್ಚು ಒಡನಾಟ ಹೊಂದಿರುವ ಹೆಗ್ಗಳಿಕೆ ಹೊಂದಿದ್ದಾರೆ. ಆದರೂ ಹೆಚ್ಚು ಅಲ್ಪಸಂಖ್ಯಾತರು, ಬಡ, ಕೂಲಿ ಕಾರ್ಮಿಕರು ವಾಸವಿರುವ ಹರೇಕಳಕ್ಕೆ ಬಸ್ ವ್ಯವಸ್ಥೆ ಸರಿಪಡಿಸುವ ಮನಸ್ಸು ಮಾಡಬೇಕಾಗಿದೆ. ಇಲ್ಲದಿದ್ದಲ್ಲಿ ನಿಮ್ಮ ಗೆಲುವಿಗಾಗಿ ದುಡಿದ, ಗೆದ್ದಾಗ ಹೆಗಲಲ್ಲಿ ಹೊತ್ತುಕೊಂಡು ಕುಣಿದಾಡಿದ ಜನರೇ ಮುಂದಿನ ಚುನಾವಣೆಯಲ್ಲಿ ಉತ್ತರ ನೀಡುವ ಸಾಮಥ್ರ್ಯ ಹೊಂದಿದ್ದಾರೆ ಎಂದರು.
ಹರೇಕಳ ಗ್ರಾಮ ಪಂಚಾಯಿತಿ ಸದಸ್ಯ ಅಶ್ರಫ್ ಮಾತನಾಡಿ, ಹರೇಕಳಕ್ಕೆ ನಾಲ್ಕು ಖಾಸಗಿ ಬಸ್ಸುಗಳು ಸಂಚರಿಸುತ್ತಿದ್ದು ಎರಡು ಸ್ಟೇಟ್ಬ್ಯಾಂಕ್ಗೆ ಹೋಗುತ್ತವೆ. ಇವುಗಳ ಪೈಕಿ ಪರವಾನಿಗೆ ಮುಗಿದು ಆರ್ ಟಿ ಓ ನಿಯಮಕ್ಕೆ ವಿರುದ್ಧವಾಗಿ ಓಡುವ ಬಸ್ಸುಗಳಿದ್ದು,ಮಳೆಗಾಲದಲ್ಲಿ ಸೋರುವುದರಿಂದ ಪ್ರಯಾಣಿಕರು ಕಷ್ಟಪಡುತ್ತಾರೆ ಎಂದು ತಿಳಿಸಿದರು.ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷ ರಫೀಕ್ ಹರೇಕಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿಪಿಐಎಂ ಹಿರಿಯ ಮುಖಂಡ ಟಿ.ಎಸ್.ಹಮೀದ್ ಮಲಾರ್, ಹರೇಕಳ ಗ್ರಾಮ ಪಂಚಾಯಿತಿ ಸದಸ್ಯ ಹನೀಫ್ ಹರೇಕಳ, ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಸದಸ್ಯ ಇಸ್ಮಾಯಿಲ್, ಹರೇಕಳ ಘಟಕಾಧ್ಯಕ್ಷ ನಿಝಾಂ, ಮುಖಂಡ ಸಿರಾಜ್ ಇನ್ನಿತರರು ಭಾಗವಹಿಸಿದ್ದರು.


