UN NETWORKS
ಉಳ್ಳಾಲ: ಉಳ್ಳಾಲ ಉಳಿಯ ನೇತ್ರಾವತಿ ನದಿ ತೀರದಲ್ಲಿ ನೀರಿನ ಮಟ್ಟ ಏರಿಕೆಯಾಗಿ ಸ್ಥಳೀಯ ಜನವಸತಿ ಪ್ರದೇಶಗಳು ಜಲಾವೃತವಾಗಿದೆ.
ಗುರುವಾರ ತಡರಾತ್ರಿಯಿಂದ ನೆರೆ ಬಂದಿದ್ದು, ಸುಮಾರು 50 ಕ್ಕು ಅಧಿಕ ಮನೆಗಳು ಜಲಾವೃತವಾಗಿದೆ. ಉಳಿಯ ನಿವಾಸಿ ವಿಲ್ಫ್ರೆಡ್ ಡಿಸೋಜ, ಎಂಡ್ರಿ ಡಿಸೋಜ, ಸುನಿಲ್, ಭವಾನಿ, ಜಗದೀಶ್, ಲ್ಯಾನ್ಸಿ ಡಿಸೋಜ, ರುಫೀನಾ ಡಿಸೋಜ, ರೆಮೇಝಾ, ಫೆಲಿಕ್ಸ್ ಡಿಸೋಜ, ಸ್ಟೀವನ್ , ಪ್ರವೀಣ್ ಕುಟಿನ್ಹಾ, ರಾಬಟ್ 9 ಡಿಸೋಜ, ಸ್ಟೆಲ್ಲಾ , ರಚನಾ, ಸುಝಾನ ಡಿಸೋಜ ಎಂಬವರ ಮನೆಗಳ ಅಂಗಳದಲ್ಲಿ ನೀರು ತುಂಬಿದೆ.
ರಾತ್ರಿಯಿಡೀ ಮಲಗಲಿಲ್ಲ : ತಡರಾತ್ರಿ 11 ಗಂಟೆ ನಂತರ ಮನೆ ಅಂಗಳವಿಡೀ ಜಲಾವೃತವಾಗಿದೆ. ಎಲ್ಲರೂ ಮನೆಯೊಳಗೆ ನೀರು ಬರುವ ಆತಂಕದಲ್ಲಿ ಸಾಮಾಗ್ರಿಗಳನ್ನು ಮೇಲಕ್ಕೆ ಇಟ್ಟಿದ್ದಾರೆ. ಸ್ಥಳೀಯ ಯುವಕರೆಲ್ಲರೂ ಸೇರಿಕೊಂಡು ಹೊರಗಡೆಯೇ ಸ್ಥಳೀಯರ ನೆರವಿಗೆ ನಿಂತಿದ್ದರು. ಹಲವು ವರ್ಷಗಳ ಬಳಿಕ ಈ ಭಾಗದಲ್ಲಿ ನೆರೆ ನೀರು ತುಂಬಿದೆ . ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಅವಶ್ಯಕತೆ ಬಿದ್ದಲ್ಲಿ ಸಂತ್ರಸ್ತರಿಗಾಗಿ ಗಂಜಿ ಕೇಂದ್ರ ಸ್ಥಾಪಿಸುವ ಭರವಸೆ ನೀಡಿದ್ದಾರೆ ಎಂದು ಸ್ಥಳೀಯ ಪ್ರಮೀಳಾ ಡಿಸೋಜ ತಿಳಿಸಿದ್ದಾರೆ.


