UN NETWORKS
ಉಳ್ಳಾಲ: ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ವೈದ್ಯಕೀಯ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿಯ ಜೊತೆಗೆ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಅನುಕೂಲಕರವಾದ ಮಿತದರದಲ್ಲಿ ಶಸ್ತ್ರಚಿಕಿತ್ಸೆ ನಡೆಸಿಕೊಂಡು ಬರುತ್ತಿರುವ ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕಾರ್ಯ ಶ್ಲಾಘನೀಯ ಎಂದು ರಾಜ್ಯ ಆಹಾರ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅಭಿಪ್ರಾಯಪಟ್ಟರು.
ದೇರಳಕಟ್ಟೆ ಯೇನೆಪೋಯ ಆಸ್ಪತ್ರೆಯಲ್ಲಿ ಶನಿವಾರ ನಡೆದ ರೊಬೊಟಿಕ್ ಮತ್ತು 3ಡಿ ನೆಫ್ರೋಸ್ಕೋಪಿ ನೇರ ಶಸ್ತ್ರಚಿಕಿತ್ಸಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಉದ್ಯಮಿಗಳು ವ್ಯಾಪಾರದ ದೃಷ್ಟಿಕೋನವನ್ನು ಇಟ್ಟುಕೊಂಡೇ ಮುಂದುವರಿಯುವವರು. ಆದರೆ ಯೆನೆಪೋಯ ಸಂಸ್ಥೆ ಮಾಲೀಕರು ಉದ್ಯಮಿಯಾದರೂ ಬಡವರ್ಗದವರ ಸೇವೆ ಮಾಡುವ ಹಿತದೃಷ್ಟಿಯನ್ನು ಇಟ್ಟುಕೊಂಡು ಮುಂದುವರಿಯುತ್ತಿದ್ದಾರೆ. ಇತರೆ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಂದ ಯೇನೆಪೋಯ ವಿವಿ ಅಂತಹ ದೃಷ್ಟಿಕೋನದಿಂದ ಹೊರತಾಗಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ರೋಬೊ ಮೂಲಕ ನಡೆಸುವ ಒಂದು ಶಸ್ತ್ರಚಿಕಿತ್ಸೆಗೆ ಐದು ಲಕ್ಷ ವೆಚ್ಚ ತಗಲುತ್ತದೆ ಬಡವರಿಗೆ ಅಸಾಧ್ಯವಾಗಿರುವ ಶಸ್ತ್ರ ಚಿಕಿತ್ಸೆ ಕಳೆದ ಎರಡು ವರ್ಷಗಳಲ್ಲಿ 250 ಬಡ ರೋಗಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಸಂಸ್ಥೆ ಮಾಡುವ ಮೂಲಕ ಪುಣ್ಯ ಸಂಪಾದಿಸಿದ್ದಾರೆ. ಈ ಮೂಲಕ ಎಲ್ಲರಲ್ಲೂ ಒಳ್ಳೆಯ ಚಿಂತನೆಗಳನ್ನು ಬೆಳೆಸಲು ಸಾಧ್ಯ. ಯೆನೆಪೋಯ ಕುಲಪತಿಗಳು ಸಲ್ಲಿಸಿರುವ ಮನವಿಯಲ್ಲಿ ರಾಜ್ಯದಾದ್ಯಂತ ಕ್ಯಾನ್ಸರ್ ಸ್ಕ್ರೀನಿಂಗ್ ನಡೆಸಲು ಸರಕಾರ ಪ್ರೋತ್ಸಾಹಿಸುವ ಕುರಿತು ಕೋರಿದ್ದಾರೆ. ಅದರಂತೆ ಇದನ್ನು ಅನುಷ್ಠಾನಗೊಳಿಸಲು ಎಲ್ಲಾ ರೀತಿಯಲ್ಲೂ ಸಹಕರಿಸುವುದಾಗಿ ಹೇಳಿದರು.
ಯೇನೆಪೋಯ ವಿಶ್ವವಿದ್ಯಾಲಯದ ಕುಲಪತಿ ವೈ.ಅಬ್ದುಲ್ಲಾ ಕುಂಞ ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲರಿಗೂ ಸಹಕಾರ ಆಗುವ ಉದ್ದೇಶದಿಂದ ಯೆನೆಪೋಯ ಸಂಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದುಬಾರಿ ರೋಬೋಟಿಕ್ ತಂತ್ರಜ್ಞಾನವನ್ನು ಅಳವಡಿಸಿ, 2016ರಲ್ಲಿ ಆರಂಭಿಸಲಾದ ರೊಬೊಟಿಕ್ ಶಸ್ತ್ರ ಚಿಕಿತ್ಸಾ ವ್ಯವಸ್ಥೆಯಡಿ ಆರ್ಥಿಕವಾಗಿ ಹಿಂದುಳಿದ 250 ರೋಗಿಗಳಿಗೆ ಸರ್ಕಾರದ ಯೋಜನೆಯಡಿ ಪ್ರಯೋಜನ ಕಲ್ಪಿಸಲಾಗಿದೆ ಎಂದರು.
ಇಸ್ಲಾಮಿಕ್ ಎಜ್ಯುಕೇಶನ್ ಅಕಾಡೆಮಿ ಅಧ್ಯಕ್ಷ ವೈ.ಮಹಮ್ಮದ್ ಕುಂಞ, ಕುಲಪತಿ ಡಾ.ವಿಜಯ ಕುಮಾರ್, ಬೆಂಗಳೂರು ವೈದ್ಯಕೀಯ ಕಾಲೇಜಿನ ಗ್ಯಾಸ್ಟ್ರೋನ್ಟೋಲಜಿ ವಿಭಾಗ ಮುಖ್ಯಸ್ಥ ಡಾ.ಅಶೋಕ್ ಕುಮಾರ್ ಕೆ.ವಿ., ಬೆಂಗಳೂರು ಎಚ್.ಸಿ.ಸಿ. ಆಸ್ಪತ್ರೆಯ ನಿರ್ದೇಶಕ ಡಾ.ಗೋಪಿನಾಥ್, ಮುಂಬಾಯಿ ಜಸ್ಲೋಕ್ ಆಸ್ಪತ್ರೆಯ ಯುರೋಲಜಿ ವಿಭಾಗ ನಿರ್ದೇಶಕ ಡಾ.ಪರ್ಸಿಕರ್ ಚಿಬ್ಬಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಘಟನಾ ಕಾರ್ಯದರ್ಶಿ ಡಾ.ಮುಜೀಬುರಹ್ಮಾನ್ ಸ್ವಾಗತಿಸಿದರು. ಡಾ.ಜಲಾಲುದ್ದೀನ್ ಅಕ್ಬರ್ ವಂದಿಸಿದರು. ಡಾ.ಬಸಿಲ್ಲಾ ಹಾಗೂ ಡಾ.ನ್ಯಾನ್ಸಿ ಕಾರ್ಯಕ್ರಮ ನಿರೂಪಿಸಿದರು.


