UN NETWORKS
ಉಳ್ಳಾಲ: ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ವೈದ್ಯಕೀಯ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿಯ ಜೊತೆಗೆ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಅನುಕೂಲಕರವಾದ ಮಿತದರದಲ್ಲಿ ಶಸ್ತ್ರಚಿಕಿತ್ಸೆ ನಡೆಸಿಕೊಂಡು ಬರುತ್ತಿರುವ ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕಾರ್ಯ ಶ್ಲಾಘನೀಯ ಎಂದು ರಾಜ್ಯ ಆಹಾರ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅಭಿಪ್ರಾಯಪಟ್ಟರು.
ದೇರಳಕಟ್ಟೆ ಯೇನೆಪೋಯ ಆಸ್ಪತ್ರೆಯಲ್ಲಿ ಶನಿವಾರ ನಡೆದ ರೊಬೊಟಿಕ್ ಮತ್ತು 3ಡಿ ನೆಫ್ರೋಸ್ಕೋಪಿ ನೇರ ಶಸ್ತ್ರಚಿಕಿತ್ಸಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಯೇನೆಪೋಯ ವಿಶ್ವವಿದ್ಯಾಲಯದ ಕುಲಪತಿ ವೈ.ಅಬ್ದುಲ್ಲಾ ಕುಂಞ ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲರಿಗೂ ಸಹಕಾರ ಆಗುವ ಉದ್ದೇಶದಿಂದ ಯೆನೆಪೋಯ ಸಂಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದುಬಾರಿ ರೋಬೋಟಿಕ್ ತಂತ್ರಜ್ಞಾನವನ್ನು ಅಳವಡಿಸಿ, 2016ರಲ್ಲಿ ಆರಂಭಿಸಲಾದ ರೊಬೊಟಿಕ್ ಶಸ್ತ್ರ ಚಿಕಿತ್ಸಾ ವ್ಯವಸ್ಥೆಯಡಿ ಆರ್ಥಿಕವಾಗಿ ಹಿಂದುಳಿದ 250 ರೋಗಿಗಳಿಗೆ ಸರ್ಕಾರದ ಯೋಜನೆಯಡಿ ಪ್ರಯೋಜನ ಕಲ್ಪಿಸಲಾಗಿದೆ ಎಂದರು.
ಇಸ್ಲಾಮಿಕ್ ಎಜ್ಯುಕೇಶನ್ ಅಕಾಡೆಮಿ ಅಧ್ಯಕ್ಷ ವೈ.ಮಹಮ್ಮದ್ ಕುಂಞ, ಕುಲಪತಿ ಡಾ.ವಿಜಯ ಕುಮಾರ್, ಬೆಂಗಳೂರು ವೈದ್ಯಕೀಯ ಕಾಲೇಜಿನ ಗ್ಯಾಸ್ಟ್ರೋನ್ಟೋಲಜಿ ವಿಭಾಗ ಮುಖ್ಯಸ್ಥ ಡಾ.ಅಶೋಕ್ ಕುಮಾರ್ ಕೆ.ವಿ., ಬೆಂಗಳೂರು ಎಚ್.ಸಿ.ಸಿ. ಆಸ್ಪತ್ರೆಯ ನಿರ್ದೇಶಕ ಡಾ.ಗೋಪಿನಾಥ್, ಮುಂಬಾಯಿ ಜಸ್ಲೋಕ್ ಆಸ್ಪತ್ರೆಯ ಯುರೋಲಜಿ ವಿಭಾಗ ನಿರ್ದೇಶಕ ಡಾ.ಪರ್ಸಿಕರ್ ಚಿಬ್ಬಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಘಟನಾ ಕಾರ್ಯದರ್ಶಿ ಡಾ.ಮುಜೀಬುರಹ್ಮಾನ್ ಸ್ವಾಗತಿಸಿದರು. ಡಾ.ಜಲಾಲುದ್ದೀನ್ ಅಕ್ಬರ್ ವಂದಿಸಿದರು. ಡಾ.ಬಸಿಲ್ಲಾ ಹಾಗೂ ಡಾ.ನ್ಯಾನ್ಸಿ ಕಾರ್ಯಕ್ರಮ ನಿರೂಪಿಸಿದರು.