UN NETWORKS
ಸೋಮೇಶ್ವರ: ರಾಜ್ಯದಾದ್ಯಂತ ಧಾರ್ಮಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಕೆಲಸಗಳು ಆಗುತ್ತಿದ್ದು, ಧಾರ್ಮಿಕ ನೆಲೆಯಲ್ಲಿ ಎಲ್ಲಾ ಸಮಾಜದವರು ಸಾಮರಸ್ಯದಿಂದ ಕೂಡಿ ಆಚರಿಸುವ ಕ್ಷೇತ್ರಗಳ ಇತಿಹಾಸವಿದೆ. ಈ ನಿಟ್ಟಿನಲ್ಲಿ ಲೋಕಲ್ಯಾಣಕ್ಕಾಗಿ ಶಿವನ ಮಹತ್ವದ ಆಚರಣೆಯಾದ ಸೀಯಾಳಾಭಿಷೇಕವನ್ನು ಹಮ್ಮಿಕೊಂಡಿರುವ ಕಾರ್ಯ ಅರ್ಥಪೂರ್ಣ ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಹೇಳಿದ್ದಾರೆ.

ಅವರು ಸೋಮೇಶ್ವರದ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಲೋಕಕಲ್ಯಾಣಕ್ಕಾಗಿ, ನಾಡಿನ ಏಕತೆ ಮತ್ತು ಐಕ್ಯತೆಗಾಗಿ , ಸರ್ವಜನರ ಇಷ್ಟಾರ್ಥ ಸಿದ್ಧಿಗಾಗಿ ಸೋಮವಾರ ಕ್ಷೇತ್ರದಲ್ಲಿ ಜರಗಿದ ಶ್ರೀ ಸೋಮನಾಥ ದೇವರಿಗೆ ಸೀಯಾಳ ಅಭಿಷೇಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಿವ ದೇವರಿಗೆ ಸಿಯಾಳ ಅಭಿಷೇಕ ಮಹತ್ವದ ಆರಾಧನೆಯಾಗಿದೆ. ರಾಜ್ಯದ ಎಲ್ಲೆಡೆಯೂ ಕ್ಷೇತ್ರಗಳಲ್ಲಿ ಇಲ್ಲದ ಶಿಷ್ಟಾಚಾರ, ಶ್ರದ್ಧೆ ಜಿಲ್ಲೆಯ ಕ್ಷೇತ್ರಗಳಲ್ಲಿ ಪಾಲನೆಯಾಗುತ್ತಿದೆ. ಸೋಮೇಶ್ವರ ದೇವಸ್ಥಾನ ಎಲ್ಲಾ ಧರ್ಮದವರು ಬರುವ ಕ್ಷೇತ್ರ. ಇಲ್ಲಿನ ಜೀರ್ಣೋದ್ಧಾರ ಕಾಮಗಾರಿಯೂ ನಡೆಯುತ್ತಿದ್ದು, ಮುಂದಿನ ವರ್ಷ ಬ್ರಹ್ಮಕಲಶೋತ್ಸವವೂ ಜರಗಲಿದೆ. ಕ್ಷೇತ್ರದ ಶಾಸಕರು ಹಾಗೂ ಸಚಿವರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಅವರ ಪ್ರೋತ್ಸಾಹದಿಂದ ಕಾಮಗಾರಿಗಳು ವಿಳಂಬವಿಲ್ಲದೆ ನಡೆಯುತ್ತಿದೆ. ಜಿಲ್ಲೆಯ ಹಳೇಕೋಟೆ ಮಾರಿಯಮ್ಮ, ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರಗಳ ಜೀರ್ಣೋದ್ಧಾರ ಮುಂದಿನ ವರ್ಷ ಜರಗುವ ಜೊತೆಗೆ ಶ್ರೀ ಕ್ಷೇತ್ರ ಸೋಮೇಶ್ವರದ ಜೀಣೋದ್ಧಾರ ನಡೆಯಲು ಸಮಿತಿ ಪೂರ್ಣ ಶ್ರಮ ವಹಿಸುತ್ತಿದೆ. ಕ್ಷೇತ್ರದ ಅಭಿವೃದ್ಧಿಗೆ ಸರ್ವರ ಸಹಕಾರವೂ ಅಗತ್ಯ ಬೇಕಿದೆ ಎಂದ ಅವರು ಶಬರಿಮಲೆ, ಉದ್ಯಾವರ, ಬಪ್ಪನಾಡು ಕ್ಷೇತ್ರಗಳಲ್ಲಿ ಎಲ್ಲಾ ಸಮಾಜದವರು ಜತೆಯಾಗಿ ಕೂಡಿ ಬಾಳಿ ಬರುತ್ತಿರುವ ಇತಿಹಾಸವಿದೆ. ಈ ನಿಟ್ಟಿನಲ್ಲಿ ಲೋಕಕಲ್ಯಾಣಾರ್ಥಕ್ಕಾಗಿ ನಡೆಯುತ್ತಿರುವ ಸಿಯಾಳಾಭಿಷೇಕದಿಂದ ಎಲ್ಲರ ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.
ಶ್ರೀ ಸೋಮನಾಥ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ರವೀಂದ್ರನಾಥ ರೈ ಮಾತನಾಡಿ ಜೀಣೋದ್ಧಾರ ಸಮಿತಿ ಮುಂದಿನ ವರ್ಷ ಕ್ಷೇತ್ರದ ಬ್ರಹ್ಮಕಲಶೋತ್ಸವ ನಡೆಸಲು ತೀರ್ಮಾನಿಸಿದೆ. ಜೊತೆಗೆ ಬ್ರಹ್ಮರಥೋತ್ಸವದ ಸಮರ್ಪಣೆಯೂ ಜರಗಲಿದೆ. ಸಭಾಗೃಹದ ಕಾಮಗಾರಿ ನಡೆಯುತ್ತಿದ್ದು, ಪರಿವಾರ ಗುಡಿಗಳಾದ ಶ್ರೀ ಮಹಾಗಣಪತಿ, ಶ್ರೀ ವಿಷ್ಣು, ಶ್ರೀ ಕೃಷ್ಣ ದೇವರ ನವೀಕರಣ ಕಾಮಗಾರಿಗಳು ಶೀಘ್ರವೇ ನಡೆಯಲಿದೆ. ಕ್ಷೇತ್ರದ ಅಭಿವೃದ್ಧಿಗೆ ಸಮಿತಿ ಬಹಳ ಯೋಜನೆಗಳನ್ನು ಹಮ್ಮಿಕೊಂಡಿದೆ. ಎಲ್ಲರ ಸಹಕಾರ ಬೇಕಿದೆ ಎಂದರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ ಸೋಮೇಶ್ವರ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ಕಾರ್ಯನಿರ್ವಹಣಾಧಿಕಾರಿ ಅರವಿಂದ.ಎ ಸುತಗುಂಡಿ, ಪ್ರಧಾನ ಅರ್ಚಕರಾದ ಸೂರ್ಯನಾರಾಯಣ ಹೊಳ್ಳ, ಶ್ರೀ ಭಗವತಿ ಸೇವಾ ಸಹಕಾರಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಸುರೇಶ್ ಭಟ್ನಗರ, ಕೊಲ್ಯ ಕೊರಗಜ್ಜ ಸೇವಾ ಸಮಿತಿ ಗೌರವಾಧ್ಯಕ್ಷ ದೇವದಾಸ್ ಕೊಲ್ಯ, ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವ.ಆರ್ ಉಚ್ಚಿಲ್, ದೀಪಕ್ ರೈ ಪಿಲಾರ್, ಬೆಳ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯ ಕೃಷ್ಣಪ್ಪ, ಮೊದಲಾದವರು ಉಪಸ್ಥಿತರಿದ್ದರು.




