UN NETWORKS
ಉಪ್ಪಿನಂಗಡಿ: ಗೃಹರಕ್ಷಕ ದಳ ಉಪ್ಪಿನಂಗಡಿ ಘಟಕ ವಿಪತ್ತು ನಿರ್ವಹಣಾ ತಂಡಕ್ಕೆ ಕಾರ್ಯಚರಣೆ ಮಾಡಲು ಅನುಕೂಲವಾಗುವಂತೆ ನೆರೆ ಸಂದರ್ಭಗಳಲ್ಲಿ ಜನರನ್ನು ಸುಲಭವಾಗಿ ಸ್ಥಳಾಂತರಿಸುವ ನಿಟ್ಟಿನಲ್ಲಿ, ಗಾಳಿ ತುಂಬಿಸಿ ಚಲಾವಣೆ ಮಾಡುವ ರಬ್ಬರ್ ಬೋಟನ್ನು ದ.ಕ. ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ| ಮುರಲೀ ಮೋಹನ್ ಚೂಂತಾರು ರವಿವಾರ, 8-07-2018ರಂದು ಉಪ್ಪಿನಂಗಡಿ ಗೃಹರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ಮತ್ತು ವಿಪತ್ತು ನಿರ್ವಹಣಾ ತಂಡದ ಮುಖ್ಯಾಸ್ಥ ಶ್ರೀ ದಿನೇಶ್ ಇವರಿಗೆ ಹಸ್ತಾಂತರ ಮಾಡಿದರು.
ದ.ಕ. ಜಿಲ್ಲಾ ಜಿಲ್ಲಾಧಿಕಾರಿಯವರು ದ.ಕ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರ ಕೋರಿಕೆಯ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳಕ್ಕೆ ವಿಪತ್ತು ನಿರ್ವಹಣೆ ಮಾಡಲು ಅನುಕೂಲವಾಗುವಂತೆ ಎರಡು ರಬ್ಬರ್ ಬೋಟು, 50 ರೈನ್ ಕೋಟ್, 50 ರೈನ್ ಬೂಟ್ ಮತ್ತು 25 ಟಾರ್ಚ್‍ಗಳನ್ನು ಜಿಲ್ಲಾ ವಿಪತ್ತು ನಿಧಿಯಿಂದ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇದರಲ್ಲಿ ಒಂದು ಬೋಟು, 5 ರೈನ್‍ಕೋಟ್, 5 ರೈನ್ ಬೂಟ್ ಮತ್ತು 2 ಟಾರ್ಚ್‍ಗಳನ್ನು ಉಪ್ಪಿನಂಗಡಿ ಘಟಕಕ್ಕೆ ನೀಡಲಾಗಿದೆ. 130 ಕೆಜಿ ತೂಕವುಳ್ಳ ಈ ರಬ್ಬರ್ ಬೋಟಿನಲ್ಲಿ ಏಕಕಾಲಕ್ಕೆ 10 ಮಂದಿಯನ್ನು (ಸುಮಾರು 1300 ಕೆ ತೂಕ) ಸ್ಥಳಾಂತರಿಸಬಹುದಾಗಿದೆ.
ಸ್ವಯಂಚಾಲಿತ ಯಂತ್ರ ಅಳವಡಿಸಲಾದ ಈ ಬೋಟ್ 3.25 ಲಕ್ಷ ಬೆಲೆ ಬಾಳುತ್ತದೆ. ಇದೇ ಸಂದರ್ಭದಲ್ಲಿ ಬೋಟಿನ ಬಳಕೆಯ ಪ್ರಾತ್ಯಕ್ಷಿತೆಯನ್ನು ನೀಡಲಾಯಿತು. ದೇವಸ್ಥಾನದ ನದಿ ತಡದಲ್ಲಿ ಈ ರಬ್ಬರ್ ಬೋಟ್ ಜನರಿಗೆ ಲಭ್ಯವಿದೆ ಮತ್ತು ಸಾಕಷ್ಟು ಜಾಗರೂಕತೆಯಿಂದ ಈ ಬೋಟನ್ನು ಬಳಸಲು ಡಾ| ಚೂಂತಾರು ಆದೇಶ ನೀಡಿದರು. ಈ ಬೋಟು ಹಸ್ತಾಂತರ ಕಾರ್ಯಕ್ರಮದಲ್ಲಿ ಶ್ರೀ ಸಹಸ್ರ ಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರಾದ ಅಲಿಮಾರ ರಘುನಾಥ ರೈ, ಸದಸ್ಯರಾದ ಬೆಳ್ಳಿಪ್ಪಾಡಿ ಪ್ರಕಾಶ್ ರೈ, ಡಾ| ರಾಜಾರಾಮ ದಂತವೈದ್ಯರು, ಘಟಕಾಧಿಕಾರಿ ದಿನೇಶ್ ಮತ್ತು ಸುಬ್ರಹ್ಮಣ್ಯ ಘಟಕಾಧಿಕಾರಿ ವಿಶ್ವನಾಥ ಉಪಸ್ಥಿತರಿದ್ದರು. ಸ್ಥಳೀಯ ಈಜುಗಾರರು ಮತ್ತು ಮುಳುಗು ತಜ್ಞರಾದ ಚೆನ್ನಪ್ಪ, ಇಸ್ಮಾಯಿಲ್, ಮೊಹಮ್ಮದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


