UN NETWORKS
ಕೊಣಾಜೆ: ಮೊದಲ ವೃತ್ತಿಯಾಗಿ ಮಂಗಳೂರಿನ ಬಂದರು ಹಾಗೂ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿ ಪುತ್ತೂರು ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಹುದ್ದೆ ಮಾಡುತ್ತಾ ಹಂತ ಹಂತವಾಗಿ ಮೇಲೇರುತ್ತಾ ಡಿಜಿಪಿ ಹುದ್ದೆ ತನಕ ಏರಿದ್ದು ನಿಜಕ್ಕೂ ಸಾಹಸ.
ಚಿತ್ರದುರ್ಗದಂತಹ ಮುಂದುವರಿದಿರದ ಜಿಲ್ಲೆಯಲ್ಲಿ ಎಸ್ಪಿಯಾಗಿದ್ದಾಗ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಿಂಗಳಲ್ಲಿ ಒಂದು ಬಾರಿ ಪೊಲೀಸ್ ಠಾಣೆಗೆ ಭೇಟಿ ಕೊಡುವ ಕಾರ್ಯಕ್ರಮದ ಮೂಲಕ ಪೊಲೀಸ್ ಸೇವೆ ಬಗ್ಗೆ ಜನಜಾಗೃತಿ ಮೂಡಿಸಲು ಸಾಧ್ಯವಾಗಿತ್ತು ಎಂದು ದೇಶದ ಮೊದಲ ಮಹಿಳಾ ಡಿಜಿಪಿ, ಕರ್ನಾಟಕದ ಮೊದಲ ಮಹಿಳಾ ಐಪಿಎಸ್ ಆಫೀಸರ್ ಡಾ. ಜಿಜಾ ಮಾಧವನ್ ಹರಿಸಿಂಗ್ ಅಭಿಪ್ರಾಯಪಟ್ಟರು.
ಮಂಗಳೂರು ವಿವಿಯ ಸೆಂಟರ್ ಫಾರ್ ವುಮೆನ್ಸ್ ಸ್ಟಡೀಸ್ ಆಶ್ರಯದಲ್ಲಿ ಗುರುವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಪೊಲೀಸ್ ಹುದ್ದೆಯಲ್ಲಿ ಇರುವವರಿಗೆ ಕೆಲವೊಂದು ಸಂದರ್ಭಗಳು ತಮ್ಮ ಕುಟುಂಬದ ಬಗ್ಗೆ ಹೆಚ್ಚಿನ ಗಮನ ಕೊಡಲು ಸಾಧ್ಯವಿಲ್ಲ. ಕೆಲವು ಘಟನೆಗಳು ಆತಂಕಕ್ಕೆ ತಳ್ಳುತ್ತದೆ. ಕುಟುಂಬವನ್ನೇ ಘಾಸಿಗೊಳಿಸುವಂತಹ ಘಟನೆಗಳು ನಡೆದರೂ ಅಂತಹ ಘಟನೆಗಳನ್ನು ಮೆಲುಕು ಹಾಕುತ್ತಾ ಸಾಗಿದಂತೆ ನಮ್ಮ ಸೇವೆ ಕರ್ತವ್ಯ ನಿಷ್ಠೆ ಸದಾ ಕಾಲ ಸಂತುಷ್ಟಗೊಳಿಸುತ್ತದೆ ಎಂದರು.
ಜೀವನದಲ್ಲಿ ನಮಗೆದುರಾದ ಕಹಿ ಘಟನೆಗಳನ್ನು ಮರೆಯದಿದ್ದರೆ ಗೆಲುವಿನ ದಡ ಸೇರಲು ಸಾಧ್ಯವಿಲ್ಲ. ನಮಗೆ ನಮ್ಮ ಬದುಕಿನ ಕುರಿತಾದ ನಿರ್ದಿಷ್ಟವಾದ ಗುರಿ ಇರಬೇಕು. ಎಪ್ಪತ್ತರ ದಶಕದಲ್ಲಿ ಇದ್ದಂತಹ ಮಹಿಳಾ ಸಮಾನತೆಗೂ ಪ್ರಸ್ತುತ ಕಾಲಘಟ್ಟಕ್ಕೂ ತಾಳೆ ಹಾಕಿದರೆ ದೊಡ್ಡ ಅಂತರವಿದೆ. ಮಹಿಳೆ ಸಿಕ್ಕ ಅವಕಾಶ ಬಳಸಿಕೊಂಡು ಉನ್ನತ ಹುದ್ದೆಗೆ ಏರಿ ಬದುಕಿನಲ್ಲಿ ಸಾರ್ಥಕ್ಯ ಕಂಡಿದ್ದಾರೆ. ಮಹಿಳಾ ಮೀಸಲಾತಿ, ಅಧಿಕಾರ ಪಡೆಯುವುದು ಈಗ ಕನಸಾಗಿ ಉಳಿದಿಲ್ಲ ಎಂದರು.
ಮಹಿಳೆಯರ ಮೇಲೆ ನಡೆಯುವ ವಿವಿಧ ಆಕ್ರಮಣಗಳನ್ನು ತಡೆಯಲು ಈಗಾಗಲೇ ಹಲವು ಬಗೆಯ ಕ್ರಮ ಕೈಗೊಳ್ಳಲಾಗಿದೆ. ಜೀವನದಲ್ಲಿ ಯಶಸ್ಸು ನಮ್ಮ ಪಾಲಾಗಬೇಕಾದರೆ ಯಾರೂ ಓದದ್ದನ್ನು ಓದಬೇಕು, ಯಾರೂ ಯೋಚಿಸದ್ದನ್ನು ಯೋಚಿಸಬೇಕು. ಹಾಗೆಯೇ ಯಾವುದೇ ತಪ್ಪು ಮಾಡದೆ ನಮ್ಮ ಯೋಚನೆಯನ್ನು ಯೋಜನೆಯಾಗಿ ಯಾರೂ ಮಾಡದ ಸೇವೆಯನ್ನು ಸಮಾಜಕ್ಕೆ ಸಲ್ಲಿಸಬೇಕು. ಯಶಸ್ಸು ನಮ್ಮನ್ನು ಅರಸಿ ಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಖ್ಯಾತ ಸರ್ಫರ್ ತನ್ವಿ ಜಗದೀಶ್ ಅವರನ್ನು ಸನ್ಮಾನಿಸಲಾಯಿತು.ಮಂಗಳೂರು ವಿವಿ ಕುಲಪತಿ ಪ್ರೊ. ಕೆ. ಭೈರಪ್ಪ, ಕುಲಸಚಿವ ಡಾ. ಬಿ. ನಾಗೇಂದ್ರ ಪ್ರಸಾದ್ ಉಪಸ್ಥಿತರಿದ್ದರು.
ಸೆಂಟರ್ ಫಾರ್ ವುಮೆನ್ಸ್ ಸ್ಟಡೀಸ್ನ ನಿರ್ದೇಶಕಿ ಡಾ. ಅನಿತಾ ರವಿಶಂಕರ್ ಸ್ವಾಗತಿಸಿದರು. ಡಾ. ಮೋನಿಕಾ ಸದಾನಂದ ಡಾ. ಜೀಜಾ ಅವರನ್ನು ಪರಿಚಯಿಸಿದರು. ಎಂಬಿಎ ವಿಭಾಗದ ಪ್ರೊ. ಪ್ರೀತಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.


