ಮಂಗಳೂರು: ಮಗುವಿಗೆ ಜನನದ ಅರ್ಧ ಗಂಟೆಯೊಳಗೆ ಹಾಲು ಉಣಿಸಬೇಕು. ಮೊದಲ ಆರು ತಿಂಗಳು ಎದೆ ಹಾಲು ಮಾತ್ರ ನೀಡಬೇಕು. ಕೊಲೆಸ್ಟ್ರಾಲ್ ಹಾಲು ಮಗುವಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಮೂಲ್ಯ ಆಹಾರವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಶ್ರೀಧರ್ ಎಂ.ಎಸ್ ತಿಳಿಸಿದರು.

ಮಹಿಳಾ ಮತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ನಗರ ಮತ್ತು ತಾಲೂಕು ಪಂಚಾಯತ್ ಮಂಗಳೂರು ಹಾಗೂ ಲಯನ್ಸ್ ಕ್ಲಬ್ ಪಂಪ್ವೆಲ್ , ಮಂಗಳೂರು ಇದರ ಸಹಯೋಗದೊಂದಿಗೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರಗಿದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಪಂಚಾಯತ್ ಮಂಗಳೂರಿನ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಹೊಳ್ಳ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ನಿರೂಪಣಾಧಿಕಾರಿ ರಶ್ಮಿ ಕೆ.ಎಂ, ಲಯನ್ಸ್ ಕ್ಲಬ್ ಅಧ್ಯಕ್ಷರು ಸನ್ಮಯ್ ಹೆಗ್ಡೆ, ಸ್ಥಾಪಕ ಅಧ್ಯಕ್ಷರು ರಾಜೇಶ್ ಶೆಟ್ಟಿ, ಮಹಾಬಲ ಆಳ್ವ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಡಾ| ಸಬಿತಾ ನಾಯ್ಕ್, ಉಪಪ್ರಾಂಶುಪಾಲೆ ನಿಟ್ಟೆ ನರ್ಸಿಂಗ್ ಹೋಮ್ ಮಾಹಿತಿಯನ್ನು ನೀಡಿದರು.
ಸಭೆಯಲ್ಲಿ ಲಯನ್ಸ್ ಕ್ಲಬ್ ಸದಸ್ಯರಾದ ಶಬಬರಿ, ಮಾಜಿ ಕಾರ್ಪೊರೇಟರ್ ವೀಣಾಮಂಗಳ, ಗರ್ಭಿಣಿಯರು, ಬಾಣಂತಿಯರು, ಮಕ್ಕಳ ಪೋಷಕರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಕಿಶೋರಿಯರು. ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು ಸೇರಿದಂತೆ 801 ಮಂದಿ ಭಾಗವಹಿಸಿದ್ದರು.
ಮೇಲ್ವಿಚಾರಕಿ ಸಿಂಧು ಕೆ.ಎಮ್ ನಿರೂಪಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಕೆ. ಸ್ವಾಗತಿಸಿದರು. ನಾಗರತ್ನ ವಂದಿಸಿದರು.

